ಅವನೆಂದರೆ ಆರಂಭ. ಅವನ ನಾಮವೇ ಮನಕೆ ಹಿತ. ಮನದಲ್ಲಿ ಸದಾ ಮುಗುಳ್ನಗುವ ಬಿಂಬ ಹೊತ್ತ ಅವನಿಗೆ ಶರಣಾಗತಿ. ಅವನೆಡೆಗೆ ನಡೆದಂತೆ ಒಂದು ರೀತಿ ಪುಳಕ. ಬದುಕಿಗೆ ಅವನ ನೆನಪೇ ಬೆಳಕು ಎಂಬಷ್ಟು ಹುಚ್ಚು.
ಹೌದು ರಾಮನೆಂದರೆ ಹಾಗೆ. ಮರು ಮಾತನಾಡದೆ ಹೃದಯ ಹೊಕ್ಕುವ ವ್ಯಕ್ತಿತ್ವ. ರಾಮನೆಂದರೆ ಏಕಪತ್ನಿ ವ್ರತಸ್ಥ. ಪ್ರತಿ ಹೆಣ್ಣಿಗೂ ತಾನು ಮದುವೆಯಾಗುವ ಹುಡುಗ ರಾಮನಂತಿರಬೇಕು ಎಂಬ ಆಸೆ. ರಾಮನ ವ್ಯಕ್ತಿತ್ವ, ಗುಣ, ಭಾವಗಳು ಸದಾ ಮನದಲ್ಲಿ ಹಚ್ಚ ಹಸಿರಾಗಿರುತ್ತವೆ. ಸೀತೆಗೆ ಅವನಿಂದ ಕಂಬನಿ ದೊರೆತರೂ, ರಾಮನ ಆಂತರ್ಯದ ಒಳ ಹರಿವು ನಮಗಾಗದಿದ್ದರೂ ರಾಮನೇ ಪ್ರಿಯ. ಮನಸ್ಸಿನ ಪ್ರತಿ ಮೂಲೆಯಲ್ಲೂ ರಾಮನ ಜಪಿಸುವ ಜನರಿಗೆ ಬರವಿಲ್ಲ. ರಾಮ ಎಂದರೆ ಒಂದು ತೆರನಾದ ಅದ್ಭುತ ಭಾವನೆ.
ಸೀತೆಗೆ ರಾಮನಿಂದ ದೋಷಣೆ ಸಿಕ್ಕರೂ ರಾಮಸೀತಾ ಜೋಡಿಗೆ ಇರುವ ಅನುಪಮ ಭಾವ, ಹೊಗಳಿಕೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ತಂದೆ- ತಾಯಿ, ಸ್ನೇಹಕ್ಕೆ, ಸೋದರತೆಗೆ ರಾಮ ನೀಡಿದ ಪ್ರಾಮುಖ್ಯ ಅಮೋಘ. ರಾಮನ ಮೋಡಿ ಎಷ್ಟೆಂದರೆ ಆತನೆಂದರೆ ಆಬಾಲವೃದ್ಧರಾಗಿ ಎಲ್ಲರಿಗೂ ಪ್ರಿಯ. ರಾಮನ ರಕ್ಷೆಯ ಸುತ್ತ ಬದುಕು ಬೆಳಗುವುದು ಎಂಬ ಭಾವವೇ ರೋಚಕ. ರಾಮನಾಮ ಜಪಿಸಲು ಮನ ಮಗುವಾಗಿ ನಲಿಯುವುದು. ಬೆಳದಿಂಗಳ ರಾತ್ರಿಗೂ, ತಂಗಾಳಿಯ ತಂಪಿಗೂ ರಾಮನ ನಾಮವೇ ಹಿತ. ರಾಮ ಎಂದರೆ ಕೇವಲ ನಾಮವಲ್ಲ, ಅದೊಂದು ಬದುಕು!
-ಸಂಗೀತಾ ಹೆಗಡೆ
ಶಿರಸಿ