Advertisement

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

01:25 AM Aug 05, 2020 | Hari Prasad |

– ರಾಜು ಮಡಿವಾಳ ಪೇತ್ರಿ

Advertisement

ಭಾರತೀಯರು ಶತ ಶತಮಾನಗಳಿಂದ ರಾಮ ರಾಜ್ಯದ ಕನಸನ್ನು ಕಾಣುತ್ತಾ ಬಂದವರು.

ಪರಕೀಯರ ದಾಳಿ, ಮತಾಂತರ, ಪರ ಸಂಸ್ಕ್ರತಿಯ ಆಡಳಿತದಂತಹ ವಿಘ್ನಗಳಿಂದ ನಮ್ಮ ಈ ಕನಸುಗಳೆಲ್ಲಾ ಭಗ್ನಗೊಂಡಿದ್ದವು.

ರಾಮ ರಾಜ್ಯವೆಂದರೆ ಜಗತ್ತಿನ ಸಾರ್ವಕಾಲಿಕ ಸರ್ವಶ್ರೇಷ್ಠ ಆಡಳಿತ ವ್ಯವಸ್ಥೆ.

ಸತ್ಯ, ಧರ್ಮ, ನ್ಯಾಯ ಮತ್ತು ಜಗತ್ತಿನ ಸಾವಿರಾರು ಸತ್ಕರ್ಮಗಳ ಸಂಗಮ.

Advertisement

ಇಂತಹ ಒಂದು ಆಡಳಿತ ವ್ಯವಸ್ಥೆಯನ್ನು ಭರತ ವರ್ಷದಲ್ಲಿ ಪ್ರತಿಷ್ಠಾಪಿಸುವುದು ರಾಷ್ಟ್ರೀಯವಾದಿಗಳ ಬಹುಕಾಲದ ಕನಸು. ಸುವರ್ಣ ಸದೃಶವಾದ ಈ ವ್ಯವಸ್ಥೆಯನ್ನು ಸರ್ವಶಕ್ತ ಭಾರತೀಯರು ಪಡೆದಲ್ಲಿ ಮಗದೊಮ್ಮೆ ಸುವರ್ಣ ಯುಗವನ್ನು ಕಾಣುವುದು ನಿಸ್ಸಂಶಯ.

ಈ ಒಂದು ಮಹಾನ್ ಯಜ್ಞಕ್ಕೆ ಪೂರಕವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಉಂಟಾಗಿದೆ. ಸೂರ್ಯೋದಯಕ್ಕೂ ಮೊದಲು ಅರುಣೋದಯದಲ್ಲಿ ಭೂಮಂಡಲವನ್ನು ಮಂದ ಬೆಳಕೊಂದು ಬೆಳಗುತ್ತದೆ, ಅಂತೆಯೇ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ರಾಮ ರಾಜ್ಯದ ಪಥದಲ್ಲಿ ಸಾಗುವ ಸುಲಕ್ಷಣಗಳು ಅರುಣೋದಯದ ಕಿರಣಗಳಂತೆ ಶೋಭಾಯಮಾನವಾಗಿದೆ.

ಹಿಂದೆ ಭಾರತದಲ್ಲಿ ಓಲೈಕೆ ರಾಜಕಾರಣ ಹೇಗಿತ್ತೆಂದರೆ ಜನನಿಬಿಡ ಪ್ರದೇಶದ ಮಾರ್ಗದ ಮಧ್ಯದಲ್ಲೊಂದು ಅನಧಿಕೃತ ಪ್ರಾರ್ಥನಾ ಮಂದಿರವೊಂದು ಹುಟ್ಟಿಕೊಂಡರೆ ಅದರಿಂದ ಸಂಚಾರ ವ್ಯವಸ್ಥೆಗೆ ಭಂಗವಿದ್ದರೂ ಸ್ಥಳೀಯ ಪಂಚಾಯತ್ ನಿಂದ ಸುಪ್ರೀಂಕೋರ್ಟ್ ವರೆಗೂ ಯಾರಿಗೂ ಅದನ್ನು ತೆರವುಗೊಳಿಸುವ ಅಧಿಕಾರವಿದ್ದಿರಲಿಲ್ಲ

ಅಂತಹ ಕಾಲಘಟ್ಟದಲ್ಲಿದ್ದ ಭಾರತದ ರಾಜಕೀಯದಲ್ಲಿ ಮೋದಿಯವರ ಪ್ರವೇಶದ ನಂತರ ಒಂದು ರೀತಿಯಲ್ಲಿ ಜಗತ್ತಿನ ಸಮಸ್ಯೆ ಎನ್ನಬಹುದಾದ ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಿ ಅಲ್ಲಿ ರಾಮಮಂದಿರವನ್ನು ನಿರ್ಮಿಸುವ ಕೈಂಕರ್ಯಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಇದು ಶತಮಾನಗಳಿಂದ ಭಾರತದಲ್ಲಿ ನಡೆದ ದುರಾಡಳಿತದ ಕಹಿಯನ್ನು ಮರೆಸುವ ಅಮೃತ ಸದೃಶವಾದ ಮಹತ್ಕಾರ್ಯ.

1947ರಲ್ಲಿ ಭಾರತ ಮಾತೆ ದಾಸ್ಯದಿಂದ ಮುಕ್ತಳಾದಳು. ಈಗ ನಡೆಯುವ ಶಿಲಾನ್ಯಾಸದ ಮೂಲಕ ಸನಾತನ ಧರ್ಮವೊಂದು ದಾಸ್ಯ ಮುಕ್ತವಾಗಿದೆ. ಪ್ರಭು ಶ್ರೀ ರಾಮನ ಪುನರ್ ಪಟ್ಟಾಭಿಷೇಕವಾಗಿದೆ. ಇದು ಅಖಂಡ ಭಾರತದ ಪರಿಕಲ್ಪನೆಯ ಸಾಕ್ಷಾತ್ಕಾರಕ್ಕೆ ನಾಂದಿ ಎನ್ನಬಹುದು.

ಆಗಸ್ಟ್ 5ರ ಬುಧವಾರದಂದು ನಡೆಯಲಿರುವ ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜಗತ್ ಪ್ರಸಿದ್ಧ ದೇವಾಲಯಕ್ಕೆ ಅಡಿಪಾಯವಾದರೆ, ಪೂರ್ಣಗೊಂಡ ಮಂದಿರ ರಾಮ ರಾಜ್ಯದ ಸ್ಥಾಪನೆಗೆ ದಿಕ್ಸೂಚಿಯಾಗಬೇಕು. ಭಾರತ ಗತ ವೈಭವಕ್ಕೆ ಮರಳಬೇಕು. ವಿಶ್ವ ಗುರುವಿನ ಪೀಠದಲ್ಲಿ ಭಾರತ ಮಾತೆಯನ್ನು ಪ್ರತಿಷ್ಠಾಪಿಸಬೇಕು. ಭಾರತೀಯರ ಈ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿ ಒಂದು ಮಂತ್ರಕ್ಕಿದೆ, ಅದುವೇ ‘ಆತ್ಮ ನಿರ್ಭರ ಭಾರತ’. ಈ ಮಂತ್ರದ ಮಹತ್ವವನ್ನು ಅರಿತು ನಡೆದರೆ ವಿಶ್ವಭೂಪಟದಲ್ಲಿ ಭಾರತ ಪ್ರಕಾಶಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next