Advertisement

ರಾಮಮಂದಿರ ದೇಣಿಗೆಗೆ ಮೂರು ಸ್ತರದ ಭದ್ರತೆ

03:12 AM Feb 11, 2021 | Team Udayavani |

ಜೈಪುರ: ರಾಮಮಂದಿರ ನಿರ್ಮಾಣಕ್ಕೆ ದೇಶವಾಸಿಗಳು ನೀಡುವ ದೇಣಿಗೆಯ ಸಮರ್ಥ ವಿನಿಯೋಗ ಮತ್ತು ಗರಿಷ್ಠ ಪಾರದರ್ಶಕ ವ್ಯವಸ್ಥೆ ಹೊಂದಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನಿರ್ಧರಿಸಿದೆ. ಅದಕ್ಕಾಗಿ ಮೂರು ಹಂತಗಳ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಆನ್‌ಲೈನ್‌ ಮೇಲ್ವಿಚಾರಣೆಯ ಆ್ಯಪ್‌, ವಿಶೇಷ ಐಡಿ ಮತ್ತು ಕಠಿನ ಲೆಕ್ಕಪತ್ರ ಪರಿಶೋಧನೆ ಎಂಬ ಮೂರು ಸೂತ್ರಗಳ ಮೂಲಕ ದೇಣಿಗೆಗಳ ಮೊತ್ತದ ಸಮರ್ಥ ವಿನಿಯೋಗಕ್ಕೆ ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳಿಗೆ ಹೊಸ ವ್ಯವಸ್ಥೆ ಬಗ್ಗೆ ತರಬೇತಿ ನೀಡುತ್ತಿರುವ ಲೆಕ್ಕಪತ್ರ ಪರಿಶೋಧಕ ಅಭಿಷೇಕ್‌ ಅಗರ್ವಾಲ್‌ ಹೇಳಿದ್ದಾರೆ. ಜ.15ರಿಂದ ಶುರುವಾಗಿರುವ ದೇಣಿಗೆ ಸಂಗ್ರಹ ಕಾರ್ಯ ಫೆ.27ರ ವರೆಗೆ ಮುಂದುವರಿಯಲಿದೆ. ಈವರೆಗೆ ದೇಶಾದ್ಯಂತ 1000 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ.

Advertisement

ಮೊದಲ ಹಂತದಲ್ಲಿ
ಮೊದಲ ಹಂತದಲ್ಲಿ ಮೂರು ರೀತಿಯ ಕೂಪನ್‌ಗಳ (10 ರೂ., 100 ರೂ., ಮತ್ತು 1 ಸಾವಿರ ರೂ.) ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ. 2 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ದೇಣಿಗೆ ನೀಡುವವರ ಪ್ಯಾನ್‌ ಸಂಖ್ಯೆ ಪಡೆಯಲಾಗುತ್ತದೆ.
10 ರೂ, 100 ರೂ., 1 ಸಾವಿರ ರೂ. ಕೂಪನ್‌ಗಳನ್ನು ನೀಡಿ ದೇಣಿಗೆ ಪಡೆಯುವವರಿಗೆ ನಿಧಿ ಸಂಗ್ರಾಹಕ ಸಹಿ ಹಾಕಿದ ರಸೀದಿ ನೀಡಲಾಗುತ್ತದೆ. ಅದರಲ್ಲಿ ದೇಣಿಗೆ ನೀಡಿದಾತನ ಹೆಸರು, ವಿಳಾಸ, ಮೊಬೈಲ್‌ ನಂಬರ್‌ ಬರೆಯಲಾಗುತ್ತದೆ. ದೇಣಿಗೆ ಸಂಗ್ರಹಿಸಿದ ವ್ಯಕ್ತಿ ಆ ವಿವರ, ಸಂಗ್ರಹಿಸಿದ ಮೊತ್ತವನ್ನು ಮತ್ತೂಬ್ಬ ವ್ಯಕ್ತಿಗೆ ನೀಡುತ್ತಾನೆ. ಆತನ ಬಳಿ ನಿಧಿ ಸಂಗ್ರಾಹಕಾರರಿಗೆ ನೀಡಲಾಗಿರುವ ರಸೀದಿ ಪುಸ್ತಕಗಳ ವಿವರ ಇರುತ್ತದೆ.
ಸಂಗ್ರಾಹಕಾರರಿಂದ ಮೊತ್ತ ಮತ್ತು ವಿವರ ಸಂಗ್ರಹಿಸಿದ ವ್ಯಕ್ತಿ ಆ್ಯಪ್‌ನಲ್ಲಿ ನೋಂದಣಿ ಮಾಡಿರಬೇಕು. ಆತನಿಗೆ ವಿಶೇಷವಾಗಿರುವ ಸಂಕೇತ ಸಂಖ್ಯೆ ನೀಡಲಾಗುತ್ತದೆ. ಅದರ ಮೂಲಕ ಲಾಗ್‌ ಇನ್‌ ಆಗಿ ದೇಣಿಗೆ ನೀಡಿದವರ ವಿವರಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಬಳಿಕ ವಂತಿಗೆ ಕೊಟ್ಟವರಿಗೆ ಕೃತಜ್ಞತ ಸಂದೇಶ ರವಾನೆಯಾಗುತ್ತದೆ.

ಎರಡನೇ ಹಂತದಲ್ಲಿ
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಖಾತೆ ಹೊಂದಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಬರೋಡಾಗಳಿಗೆ ದೇಣಿಗೆ ಜಮೆ ಮಾಡಲಾಗುತ್ತದೆ.
ದೇಣಿಗೆ ಸಂಗ್ರಹಿಸಿದ ವ್ಯಕ್ತಿ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ ಮೂರು ಬ್ಯಾಂಕ್‌ಗಳ ಪೈಕಿ ಯಾವುದಾದರೂ ಒಂದು ಬ್ಯಾಂಕ್‌ ಆಯ್ಕೆ ಮಾಡಿ, ಅದಕ್ಕೆ ಮೊತ್ತ ಜಮೆ ಮಾಡಬೇಕು. ಜತೆಗೆ ಒಟ್ಟು ಮೊತ್ತ ಸಂಗ್ರಹವಾಗಿರುವ ಬಗ್ಗೆ ಫಾರಂ ಒಂದರಲ್ಲಿ ಭರ್ತಿ ಮಾಡಬೇಕು.

ಮೂರನೇ ಹಂತ
ಪರಿಣತ ಲೆಕ್ಕಪತ್ರ ಪರಿಶೋಧಕರು ಸಂಗ್ರಹವಾಗಿರುವ ಮೊತ್ತ, ವಿನಿಯೋಗದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಪಾಸಣೆ ನಡೆ ಸುತ್ತಾರೆ. ಬಳಿಕ ವಿವರವ‌ನ್ನು ಟ್ರಸ್ಟ್‌ಗೆ ಕಳುಹಿಸಿಕೊಡುತ್ತಾರೆ.

ಎಚ್ಚರಿಕೆ, ನಿಗಾ ಇದೆ
ನಿಧಿ ಸಂಗ್ರಾಹಕರ ಮೇಲೆ ಎಷ್ಟು ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ ಎಂಬುದರ ಮೇಲೆ ನಿಗಾ ಇರಿಸಲಾಗುತ್ತದೆ. ಸಂಗ್ರಹಿಸಿದ ಮೊತ್ತ, ಚೆಕ್‌ ಮತ್ತು ಇತರ ವಿವರಗಳನ್ನು ಉಸ್ತುವಾರಿ ಹೊಂದಿರುವ ವ್ಯಕ್ತಿಗೆ ನೀಡಲಾಗುತ್ತದೆ.
ಆತ ಆ್ಯಪ್‌ ಮೂಲಕ ಮಾಹಿತಿ ಅಪ್‌ಡೇಟ್‌ ಮಾಡಿ, ಬ್ಯಾಂಕ್‌ ಶಾಖೆಗಳಲ್ಲಿ ಜಮೆ ಮಾಡಬೇಕಾಗುತ್ತದೆ. ಜಮೆ ಮಾಡಿದ ವಿವರವನ್ನು ಜಿಲ್ಲಾ ಕಚೇರಿಗೆ ತಲುಪಿಸಬೇಕು. ಅಲ್ಲಿ ಬ್ಯಾಂಕ್‌ ಶಾಖೆಯಲ್ಲಿ ಜಮೆಯಾದ ಮೊತ್ತ ಮತ್ತು ಜಿಲ್ಲಾ ಕಚೇರಿಗೆ ತಲುಪಿರುವ ಮಾಹಿತಿಯಲ್ಲಿರುವ ಮೊತ್ತವೂ ಸಮವಾಗಿದೆಯೇ ಎಂದು ತಾಳೆ ಹಾಕಲಾಗುತ್ತದೆ.

Advertisement

ಜಿಲ್ಲೆ, ವಲಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಈ ಅಂಶಗಳನ್ನು ಗಮನಿಸಲಾಗುತ್ತದೆ ಮತ್ತು ಟ್ರಸ್ಟ್‌ನ ಕೇಂದ್ರ ಕಚೇರಿಗೂ ಮಾಹಿತಿ ರವಾನೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next