ಕೊಲ್ಹಾರ: ಪಟ್ಟಣದ ಹೊರ ವಲಯದಲ್ಲಿರುವ ಬೆಳ್ಳುಬ್ಬಿ ಲೇಔಟ್ ನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಶೈಲಿಯಲ್ಲಿ ಚಿಕ್ಕದಾದ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮತ್ತು ರಾಮ ಮಂದಿರದ ಕರ ಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, 500 ವರ್ಷಗಳ ರಾಮ ಮಂದಿರ ಹೋರಾಟಕ್ಕೆ ಕೊನೆಗೂ ನ್ಯಾಯಾಲಯದ ಮೂಲಕ ಒಂದು ತಾರ್ಕಿಕ ಅಂತ್ಯ ಲಭಿಸಿದೆ. ಅತ್ಯಂತ ಭಾವನಾತ್ಮಕ ವಿಚಾರವೊಂದರ ಇತ್ಯರ್ಥ ಕಾನೂನಿನ ಮೂಲಕ ಆಯಿತಲ್ಲ.
ಇತಿಹಾಸದಲ್ಲೆ ಮೊಕದ್ದಮೆಯೊಂದು ದೀರ್ಘ ಕಾಲ ನಡೆದ ದಾಖಲೆಯಿಲ್ಲ. ನಲವತ್ತು ದಿನಗಳವರೆಗೆ ನಿರಂತರ ದೀರ್ಘ ವಿಚಾರಣೆ ಪ್ರತಿ ನಿತ್ಯ 5 ಗಂಟೆ ವಾದ ವಿವಾದವನ್ನು ಆಲಿಸಿ ಐವರು ನ್ಯಾಯಾಧಿಧೀಶರ ಪೀಠ ಒಮ್ಮತದ ತೀರ್ಪು ನೀಡಿದ್ದು ಇತಿಹಾಸವೇ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲೇ ಶ್ರೀರಾಮ ಮಂದಿರ ನಿರ್ಮಿಸಬೇಕೆಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಸತ್ಯ ಮತ್ತು ನ್ಯಾಯ ಎರಡನ್ನೂ ಎತ್ತಿ ಹಿಡಿದಿದೆ ಎಂದರು.
ಪವಿತ್ರ ಸ್ಥಳ ಪ್ರಭು ಶ್ರೀರಾಮಚಂದ್ರ ಮಹಾರಾಜರ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದಾರೆ. ಅದೆ ಸಮಯಕ್ಕೆ ಸರಿಯಾಗಿ ನಾವುಗಳು ಇಲ್ಲಿ ರಾಮ ಮಂದಿರದ ಶೈಲಿಯಲ್ಲಿಯೇ ಸಣ್ಣದೊಂದು ಪ್ರಭು ಶ್ರೀರಾಮಚಂದ್ರರ ಮಂದಿರ ನಿರ್ಮಿಸಲು ಸಂಕಲ್ಪ ಮಾಡುತ್ತಿದ್ದೇವೆ. ಹತ್ತು ಅವತಾರಗಳಲ್ಲಿ ಒಂದು ಅವತಾರವಾದ ಶ್ರೀರಾಮನ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಹರ್ಷದಾಯಕ ಸಂಗತಿ ಎಂದರು.
ಭೂಮಿ ಪೂಜೆ ಪೂರ್ವದಲ್ಲಿ ಪಟ್ಟಣದಲ್ಲಿರುವ ಆಂಜನೇಯ ಮತ್ತು ದ್ಯಾಮವ್ವದೇವಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಗೆ ತೆರಳಿದ್ದ ಕರ ಸೇವಕರಾದ ರಾಮಣ್ಣ ಬಾಟಿ, ಸಂಗಪ್ಪ ಚಿತ್ತಾಪುರ, ಬಸಪ್ಪ ಚೌಡಪ್ಪಗೊಳ, ವಿಜಯಕುಮಾರ ನಿಲವಾಣಿ, ಅಶೋಕ ಚೌಡಪ್ಪಗೋಳ ಮತ್ತು ದಿ| ರುದ್ರಪ್ಪ ಹುಲ್ಯಾಳ, ಪುಂಡಲೀಕ ಕರಣೆ ಇವರ ಪುತ್ರರನ್ನು ಸನ್ಮಾನಿಸಲಾಯಿತು. ನಂತರ ಕಾರ್ಯಕರ್ತರು ಪರಸ್ಪರ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮೀಜಿ ಹಾಗೂ ಹಿರೇಮಠದ ಪಡದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು ರಾಜಶೇಖರ ಶೀಲವಂತ, ಮುರಿಗೆಪ್ಪ ಬೆಳ್ಳುಬ್ಬಿ, ಭೀಮಶಿ ಬೀಳಗಿ, ಮಲ್ಲು ಬೆಳ್ಳುಬ್ಬಿ, ನಾಮದೇವ ಪವಾರ, ಡೋಂಗ್ರಿ ಕಟಬರ, ಬಾಬುರಾವ್ ಬೆಳ್ಳುಬ್ಬಿ ಇದ್ದರು.