Advertisement

Lord Rama Statue: ರಾಮ ಆದೇಶ ನೀಡಿದ.. ಅದರಂತೆ ಮಾಡಿದೆನಷ್ಟೇ…; ಶಿಲ್ಪಿ ಅರುಣ್ ಯೋಗಿರಾಜ್

06:51 PM Jan 24, 2024 | Team Udayavani |

ಮುಂಬೈ: ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಡೆದ ಶ್ರೀರಾಮ ದೇವರ ಮೂರ್ತಿಯನ್ನು ಇದೀಗ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂವರು ಶಿಲ್ಪಿಗಳು ರಚಿಸಿದ ಮೂರು ಮೂರ್ತಿಯಲ್ಲಿ ಅರುಣ್ ಯೋಗಿರಾಜ್ ಅವರು ರಚಿಸಿದ ಕೃಷ್ಣಶಿಲೆಯ ಶ್ರೀರಾಮ ಮೂರ್ತಿಯು ಆಯ್ಕೆಯಾಗಿ ಇದೀಗ ಪ್ರಾಣ ಪ್ರತಿಷ್ಠೆಯಾಗಿದೆ.

Advertisement

ರಾಮ ಮೂರ್ತಿಯ ರಚನೆಯ ಬಳಿಕ ಅರುಣ್ ಯೋಗಿರಾಜ್ ಅವರು ದೇಶದಲ್ಲಿ ತಾರಾ ಪಟ್ಟಕ್ಕೇರಿದ್ದಾರೆ. ಮೂರ್ತಿ ರಚನೆಯ ಬಗ್ಗೆ ಅರುಣ್ ಯೋಗಿರಾಜ್ ಅವರು ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದ ಅನುವಾದಿತ ಭಾಗ ಇಲ್ಲಿದೆ.

ರಾಮ ಲಲ್ಲಾನ ಪ್ರತಿಮೆಯನ್ನು ಕಂಡ ಜನ ಸಮೂಹವು ಮುಖಭಾವ, ಕಣ್ಣುಗಳು ಮತ್ತು ನಗುವನ್ನು ಮೆಚ್ಚುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿದ ಅರುಣ್, “ರಾಮ ದೇವರು ನನಗೆ ಆದೇಶ ನೀಡಿದರು, ಅದರಂತೆ ನಾನು ಅನುಸರಿಸುತ್ತಾ ಹೋದೆ” ಎಂದರು.

ವಿಗ್ರಹವನ್ನು ಹೇಗೆ ಪೂರ್ಣಗೊಳಿಸಬೇಕು ಎಂದು ಯೋಚಿಸುವಾಗ ಕಳೆದ ಏಳು ತಿಂಗಳುಗಳು ವಿಶೇಷವಾಗಿ ಸವಾಲಿನವಾಗಿದ್ದವು ಎಂದು ಯೋಗಿರಾಜ್ ವಿವರಿಸಿದರು. “ಮಗುವಿನ ಮುಗ್ಧತೆಯನ್ನು ಪ್ರತಿನಿಧಿಸುವ ಐದು ವರ್ಷದ ಭಗವಾನ್ ರಾಮನ ರೂಪವನ್ನು ಪ್ರತಿನಿಧಿಸುವ ವಿಗ್ರಹವು ಶಿಲ್ಪ ಶಾಸ್ತ್ರಕ್ಕೆ ಬದ್ಧವಾಗಿದೆ ಎಂದು ನಾನು ಖಾತ್ರಿ ಕೊಳ್ಳಬೇಕಾಗಿತ್ತು” ಎಂದು ಅವರು ಹೇಳಿದರು.

Advertisement

ಮುಖದ ಲಕ್ಷಣಗಳು (ಕಣ್ಣುಗಳು, ಮೂಗು, ಗಲ್ಲ, ತುಟಿ, ಕೆನ್ನೆ ಇತ್ಯಾದಿ) ಶಿಲ್ಪ ಪ್ರಪಂಚದ ಪವಿತ್ರ ಗ್ರಂಥ ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ರಚನೆ ಮಾಡಲಾಗಿದೆ.

ಅರುಣ್ ಯೋಗಿರಾಜ್ ಅವರಿಗೆ ಮಂದಿರ ಟ್ರಸ್ಟ್ ಕೆಲವು ವಿಗ್ರಹವನ್ನು ಪೂರ್ಣಗೊಳಿಸಲು ನಿರ್ದಿಷ್ಟ ಮಾನದಂಡಗಳನ್ನು ಒದಗಿಸಿತ್ತು. ಅವುಗಳೆಂದರೆ, ನಗು ಮುಖ, ದೈವಿಕ ನೋಟ, 5 ವರ್ಷ ಪ್ರಾಯದ ಸ್ವರೂಪ, ಯುವರಾಜ ರೂಪ.

ಜನರ ಪ್ರತಿಕ್ರಿಯೆಯಿಂದ ಸಂತಸ

“ಕಳೆದರಡು ದಿನಗಳಿಂದ ಜನರು ರಾಮ ಮೂರ್ತಿಯನ್ನು ಇಷ್ಟಪಡುವುದನ್ನು ಕಂಡು ಸಂತಸಗೊಂಡಿದ್ದೇನೆ. ನನ್ನಿಂದ ರಚನೆಗೊಂಡ ಮೂರ್ತಿ ಆಯ್ಕೆಯಾದ ಸಂತಸಕ್ಕಿಂತ ಜನರು ರಾಮ ಮೂರ್ತಿಯನ್ನು ಇಷ್ಟ ಪಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ರಾಮ ಲಲ್ಲಾ ಮೂರ್ತಿ ಕೇವಲ ನನ್ನದಲ್ಲ, ಅದು ಎಲ್ಲರಿಗೂ ಸೇರಿದ್ದು” ಎಂದರು ಅರುಣ್ ಯೋಗಿರಾಜ್.

“ನನ್ನ ಕುಟುಂಬವು ಕಳೆದು 300 ವರ್ಷಗಳಿಂದ ಶಿಲ್ಪ ಕೆತ್ತನೆ ಕೆಲಸ ಮಾಡುತ್ತಿದೆ. ದೇವ ರಾಮನು ನನಗೆ ಈ ಕೆಲಸ ನೀಡಿದ್ದಕ್ಕೆ ನಾನು ಅದೃಷ್ಟವಂತ ಎಂದು ನಂಬುತ್ತೇನೆ” ಎಂದರು.

“ಕಳೆದ ಏಳು ತಿಂಗಳು, ನಾನು ತುಂಬಾ ಭಾವನಾತ್ಮಕವಾಗಿ ಕಳೆದಿದ್ದೇನೆ, ನನಗೂ ಒಬ್ಬ ಮಗ ಮತ್ತು ಮಗಳು ಇದ್ದಾರೆ, ನಾನು ನನ್ನ 7 ವರ್ಷದ ಮಗಳಿಗೆ ವಿಗ್ರಹದ ಫೋಟೋವನ್ನು ತೋರಿಸಿ ಅವನು ಹೇಗಿದ್ದಾನೆ ಎಂದು ಕೇಳುತ್ತಿದ್ದೆ; ಅದಕ್ಕವಳು ‘ಅವನು ಮಗುವಿನಂತೆ ಕಾಣುತ್ತಾನೆ’ ಎಂದು ಹೇಳಿದ್ದಳು. ವಿಗ್ರಹವು ವಿವಿಧ ಹಂತಗಳಲ್ಲಿ ವಿಭಿನ್ನವಾಗಿ ಕಾಣುತ್ತಿತ್ತು. ನಿರ್ಮಾಣ ಸಮಯದಲ್ಲಿ ಬೇರೆ ಇತ್ತು, ಪ್ರಾಣ ಪ್ರತಿಷ್ಠಾ ಸಮಯದಲ್ಲಿ ರಾಮ ಲಲ್ಲಾ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತಿದ್ದರು. ಇದು ನನ್ನ ಕೆಲಸವಲ್ಲ. ಇದು ತುಂಬಾ ಭಿನ್ನವಾಗಿ ಕಾಣುತ್ತಿದೆ. ಭಗವಂತನೇ ಬೇರೆ ರೂಪ ಪಡೆದ” ಎನ್ನುತ್ತಾರೆ ಅರುಣ್.

ಸುಲಭದ ಕೆಲಸವಲ್ಲ

ಬಾಲರಾಮನ ಮಂದಸ್ಮಿತದ ಬಗ್ಗೆ ಮಾತನಾಡಿದ ಅರುಣ್, ಕಲ್ಲಿನಲ್ಲಿ ಕೆಲಸ ಮಾಡುವಾಗ ಒಂದೇ ಒಂದು ಅವಕಾಶವಿರುತ್ತದೆ ಎಂದರು. “ನಾನು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗಿತ್ತು, ನಾನು ಹೊರಗಿನ ಪ್ರಪಂಚದ ಎಲ್ಲಾ ಸಂಪರ್ಕವನ್ನು ಕಡಿತಗೊಳಿಸಿದ್ದೆ. ನಾನು ಶಿಸ್ತಿನಿಂದಿದ್ದು, ಕಲ್ಲಿನೊಂದಿಗೆ ದೀರ್ಘಕಾಲ ಕಳೆದಿದ್ದೇನೆ” ಎಂದು ಹೇಳಿದರು.

“ಕಲ್ಲಿನಲ್ಲಿ ಭಾವವನ್ನು ತುಂಬುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಬಹಳಷ್ಟು ಸಮಯವನ್ನು ಅದರೊಂದಿಗೆ ಕಳೆಯಬೇಕಾಗುತ್ತದೆ. ಹೀಗಾಗಿ ನಾನು ಮಕ್ಕಳ ಗುಣ ಲಕ್ಷಣಗಳನ್ನು ಅಭ್ಯಸಿಸಿ, ನನ್ನದೇ ತಯಾರಿ ಮಾಡಿಕೊಂಡು, ಕಲ್ಲಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ನಿರ್ಧರಿಸಿದೆ. ಉಳಿದೆಲ್ಲವೂ ರಾಮನ ಕಾರಣದಿಂದ ನಡೆಯಿತು” ಎಂದು ನುಡಿಯುತ್ತಾರೆ ಅರುಣ್.

ಇದರ ಬಗ್ಗೆ ಮಾತನಾಡುವ ಅರುಣ್ ಪತ್ನಿ ವಿಜೇತಾ, “ಮುಖ ಮತ್ತು ದೇಹ ರಚನೆಯ ಬಗ್ಗೆ ತಿಳಿಯಲು ಅರುಣ್ ಮಾನವ ಅಂಗರಚನಾಶಾಸ್ತ್ರ ಪುಸ್ತಕಗಳನ್ನು ಓದುತ್ತಿದ್ದರು. ಮೂರ್ತಿ ಸಜೀವವಾಗಿ ಕಾಣಲು ಇದು ಕೂಡಾ ಪ್ರಮುಖ ಅಂಶ. ಅವರು ಮಕ್ಕಳನ್ನು ಗಮನಿಸಲು ಶಾಲೆಗಳಿಗೆ ಭೇಟಿ ನೀಡಿದ್ದರು. ಅಲ್ಲದೆ ಮಕ್ಕಳ ನಗುವಿನ ಬಗ್ಗೆ ಅವರು ಅಭ್ಯಾಸ ನಡೆಸಿದ್ದಾರೆ” ಎಂದರು.

ಎಲ್ಲವೂ ರಾಮನಿಂದಲೇ..

“ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಾಮಾಚರಣೆ ನಡೆಯುತ್ತಿದ್ದ ವೇಳೆ ಸಣ್ಣ ಮಕ್ಕಳು ಉತ್ಸವ ಆಚರಿಸುವನ್ನು ಕಾಣ ಸಿಕ್ಕಿತು. ಆಗ ನನಗೆ ಒಂದು ಚಿತ್ರಣ ತಲೆಯಲ್ಲಿ ಮೂಡಿತ್ತು. ಹೀಗಾಗಿ ಎಲ್ಲಾ ಸ್ಪೂರ್ತಿಯೂ ರಾಮನಿಂದಲೇ ಬಂದಿತ್ತು” ಎನ್ನುತ್ತಾರೆ ಅರುಣ್.

“ಕಲ್ಲಿನಲ್ಲಿ ನಾನು ಎರಡು ಗಂಟೆಯೊಳಗೆ ಒಂದು ಮುಖವನ್ನು ರಚಿಸಬಲ್ಲೆ. ಆದರೆ ಇಲ್ಲಿ ನನಗೆ ತಲೆ ಓಡುತ್ತಿರಲಿಲ್ಲ. ಆದರೆ ನಾನು ದೀಪಾವಳಿ ಆಚರಣೆಯ ವೇಳೆ ಅಲಂಕರಣ ಸಮಾರಂಭದಲ್ಲಿ ಮಕ್ಕಳ ಕೆಲವು ಚಿತ್ರಗಳನ್ನು ನೋಡಿದೆ. ಸರಿಯಾದ ಬೆಳಕು ಮತ್ತು ಉತ್ತಮ ಮುಖಭಾವಗಳೊಂದಿಗೆ ನಾನು ಮಕ್ಕಳ ಉತ್ತಮ ಚಿತ್ರಗಳನ್ನು ನೋಡಿದೆ” ಎಂದರು.

ದಿನವೂ ಬರುತ್ತಿದ್ದ ವಾನರ..

ಇದೇ ಸಮಯದಲ್ಲಿ ಅರುಣ್ ಯೋಗಿರಾಜ್ ಅವರು ಕುತೂಹಲಕಾರಿ ವಿಚಾರವೊಂದನ್ನು ತೆರೆದಿಟ್ಟರು. ಪ್ರತಿದಿನ ಸಂಜೆ 4-5 ಗಂಟೆ ಸುಮಾರಿಗೆ ಕಪಿಯೊಂದು ಅವರ ಮನೆ ಬಾಗಿಲಿಗೆ ಬಂದು ಕುಳಿತು ಕೊಳ್ಳುತ್ತಿತ್ತಂತೆ.

“ಚಳಿಯ ಸಮಯದಲ್ಲಿ ನಾವು ಗೇಟ್ ಹಾಕುತ್ತಿದ್ದೆವು. ಆದರೆ ಅದು ಪ್ರತಿ ದಿನ ಬಂದು ಬಾಗಿಲು ಬಡಿಯುತ್ತಿತ್ತು. ಪ್ರತಿ ದಿನ ಅದೇ ಕೋತಿ ಬರುತ್ತಿತ್ತೇ ಎನ್ನುವ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಆದರೆ ಅದು ಪ್ರತಿ ದಿನ ಒಂದೇ ಸಮಯದಲ್ಲಿ ಬರುತ್ತಿತ್ತು. ನಾನು ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹೇಳಿದ್ದೆ. ಅದಕ್ಕವರು ಬಹುಶಃ ಅದು ರಾಮ ಮೂರ್ತಿಯನ್ನು ನೋಡಲು ಬಯಸುತ್ತಿರಬೇಕು ಎಂದಿದ್ದರು” ಎನ್ನುತ್ತಾರೆ ಅರುಣ್ ಯೋಗಿರಾಜ್.

Advertisement

Udayavani is now on Telegram. Click here to join our channel and stay updated with the latest news.

Next