Advertisement

ರಾಮ ಚಾರಿತ್ರ್ಯದ, ರಾವಣ ಚಾರಿತ್ರ್ಯಹೀನತೆ ಸಂಕೇತ : ಕೇಂದ್ರ ಸಚಿವ ಪ್ರತಾಪಚಂದ್ರ ಸಾರಂಗಿ

12:53 AM Apr 25, 2021 | Team Udayavani |

ಉಡುಪಿ: ಪ್ರಭು ರಾಮಚಂದ್ರ ಅವತಾರ ಪುರುಷನಷ್ಟೇ ಅಲ್ಲದೆ ರಾಷ್ಟ್ರಪುರುಷನೂ ಆಗಿದ್ದು ದೇಶದ ಔನ್ನತ್ಯದ ಸಂಕೇತವಾಗಿ ಆತನ ಜನ್ಮಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರತಾಪಚಂದ್ರ ಸಾರಂಗಿ ಅವರು ಹೇಳಿದರು.

Advertisement

ಶ್ರೀಕೃಷ್ಣ ಮಠದ ರಾಮನವಮಿ ಉತ್ಸವದ ಅಂಗವಾಗಿ ಶನಿವಾರ ವರ್ಚುವಲ್‌ ಮಾಧ್ಯಮದಲ್ಲಿ ಅವರು ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಿದರು.

ರಾಮಾಯಣ ಕಾಲಘಟ್ಟದಲ್ಲಿ ಜನರಲ್ಲಿ ರಾವಣ, ಮಾರೀಚ, ಸುಬಾಹುವೇ ಮೊದಲಾದವರಿಂದ ನಿರ್ಮಾಣಗೊಂಡ ಅಸುರಕ್ಷಿತ ವಾತಾವರಣವನ್ನು ರಾಮ ನಿವಾರಿಸಿದ್ದ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಆ ಕಾಲದಲ್ಲಿ ರಾವಣನ ಬೆಂಬಲಿಗರಿಂದ ಗುರುಕುಲಗಳು, ಋಷಿಮುನಿಗಳು ಮಾತ್ರವಲ್ಲದೆ ಜನಜೀವನವೂ ಅಸ್ತವ್ಯಸ್ತಗೊಂಡಿತ್ತು. ಆಗ ರಾಮನ ಮೂಲಕ ವಿಧ್ವಂಸಕರ ನಿರ್ಮೂಲನವಾದರೆ ಸಹಸ್ರಾರ್ಜುನರಂಥವರು ಇನ್ನೊಂದು ಅವತಾರವಾದ ಪರಶುರಾಮರಿಂದ ನಿರ್ಮೂಲನವಾದರು ಎಂದರು.

ರಾವಣ ಚಾರಿತ್ರ್ಯಹೀನತೆ ಸಂಕೇತ
ರಾವಣನ ಸೇನೆಯನ್ನು ಸೋಲಿಸಿದವರು ಸಾಮಾನ್ಯ ವನವಾಸಿಗಳು. ಈಗಿನ ಕಾಲಕ್ಕೆ ಹೋಲಿಸುವುದಾದರೆ ಆಗಿನದು ಆತಂಕವಾದಿಗಳು ಸೃಷ್ಟಿಸುವ ಅರಾಜಕತೆಯಾಗಿದೆ. ಇದು ಅಗತ್ಯವಾಗಿ ಸಮಾಪನವಾಗಬೇಕಿತ್ತು. ಹೀಗಾಗಿಯೇ ರಾಮ ರಾಷ್ಟ್ರ ಜೀವನದ ಮೌಲ್ಯದ ಸಂಕೇತ. ಪರಸ್ತ್ರೀಯನ್ನು ಅಪಹರಿಸಿದ ರಾವಣ ಚಾರಿತ್ರ್ಯಹೀನತೆಯ ಸಂಕೇತ ಎಂದು ಸಾರಂಗಿ ಹೇಳಿದರು.
ಗಾಂಧೀಜಿಯವರ ಸರ್ವೋದಯ, ದೀನದಯಾಳರ ಅಂತ್ಯೋದಯ ಕಲ್ಪನೆಯಂತೆ ಪ್ರಧಾನಿಯವರು ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ. ಈಗ ನಾವು ಭಾರತವನ್ನು ಜಾಗತಿಕವಾಗಿ ಮುಂಚೂಣಿ ನಿಲ್ಲಿಸಬೇಕಾಗಿದೆ. ರಾಷ್ಟ್ರೀಯ ಸಾಂಸ್ಕೃತಿಕ ಪುನರುತ್ಥಾನಕ್ಕೆ ಉತ್ತಮ ದೃಷ್ಟಾಂತ ರಾಮಚಂದ್ರ ಎಂದು ಸಾರಂಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next