Advertisement

ಬಿಜೆಪಿ ಸಭೆಯಲ್ಲಿ ರಾಮಮಂದಿರ ಪ್ರಸ್ತಾವ

11:38 AM Dec 19, 2018 | Team Udayavani |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆ ಒಳಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎನ್ನುವುದು ಹಿಂದೂಪರ ಸಂಘಟನೆಗಳ ಒತ್ತಾಯ. ಅದಕ್ಕೆ ಪೂರಕವಾಗಿ ಮಂಗಳವಾರ ದಿಲ್ಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿಯೂ ಮಂದಿರ ನಿರ್ಮಾಣಕ್ಕೆ ಸೂಕ್ತ ನಿರ್ಧಾರವನ್ನು ಪಕ್ಷ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಇಬ್ಬರು ಲೋಕಸಭಾ ಸದಸ್ಯರಾದ ರವೀಂದ್ರ ಖುಶ್ವಾಹ ಮತ್ತು ಹರಿನಾರಾಯಣ ರಾಜ್‌ಭರ್‌ ಪ್ರತಿಪಾದಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅಯೋಧ್ಯೆಯಲ್ಲಿಯೇ ರಾಮ ಜನಿಸಿದ್ದಾನೆ. ಹೀಗಾಗಿ ಅಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯ. ಆದರೆ ಈ ನಿಟ್ಟಿನಲ್ಲಿ ಆತುರ ಸಲ್ಲದು ಎಂದು ಸಂಸದರಿಗೆ ತಾಳ್ಮೆಯ ಪಾಠ ಹೇಳಿದ್ದಾರೆ. 

Advertisement

ವಿಪಕ್ಷಗಳಲ್ಲಿ ಪ್ರಧಾನಿ ಮೋದಿಯವರಿಗೆ ಸವಾಲೊಡ್ಡುವ ನಾಯಕ ಇಲ್ಲ. 2019ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಸಂಸದರು ಕಾರ್ಯತತ್ಪರರಾಗಬೇಕು. ವಿಪಕ್ಷಗಳಿಗೆ ಹೋಲಿಕೆ ಮಾಡಿದರೆ ಪರಿಸ್ಥಿತಿ ನಮಗೆ ಅನುಕೂಲಕರವಾಗಿಯೇ ಇದೆ ಎಂದು ರಾಜನಾಥ್‌ ಸಿಂಗ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇರಲಿಲ್ಲ.

ಇದೇ ವೇಳೆ ಕಾರ್ಯಕ್ರಮವೊಂದರಲ್ಲಿ ಮಾñನಾಡಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಅಯೋಧ್ಯೆ ಎನ್ನುವುದು ಕೋಮುವಾದದ ವಿಚಾರವಲ್ಲ. ಜತೆಗೆ ಧಾರ್ಮಿಕವೂ ಅಲ್ಲ. ಶ್ರೀ ರಾಮ ಎನ್ನುವುದು ನಮ್ಮ ಇತಿಹಾಸದ ಭಾಗ. ಆತ ಹುಟ್ಟಿದ ಸ್ಥಳದಲ್ಲಿ ದೇಗುಲ ನಿರ್ಮಾಣ ಅಸಾಧ್ಯ ಎಂದಾದರೆ ಬೇರೆಲ್ಲಿ ಸಾಧ್ಯ? ಕೋಟ್ಯಂತರ ಮಂದಿಯ ಆಶಯ ಅದೇ ಆಗಿದೆ. ಪ್ರಕರಣ ಕೋರ್ಟ್‌ನಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next