ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿರುವುದಾಗಿ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಗುರುವಾರ ತಿಳಿಸಿದೆ. ರಾಮ ಮಂದಿರ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಮೂರರಿಂದ ಮೂರು ಕಾಲು ವರ್ಷಗಳು ಬೇಕಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಮಂದಿರ ಟ್ರಸ್ಟ್, ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ರಾಮಮಂದಿರ ಭಾರತದ ಪುರಾತನ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಭೂಕಂಪ, ಚಂಡಮಾರುತ ಹಾಗೂ ಇತರ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ನಿಟ್ಟಿನಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತದೆ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕಬ್ಬಿಣ ಬಳಸುವುದಿಲ್ಲ ಎಂದು ಟ್ರಸ್ಟ್ ಹೇಳಿದೆ.
ದೇವಸ್ಥಾನ ಕಟ್ಟಲಿರುವ ಜಾಗದ ಮಣ್ಣನ್ನು ರೂರ್ ಕೀ ಸಿಬಿಆರ್ ಐ ಇಂಜಿನಿಯರ್ಸ್, ಎಲ್ ಆ್ಯಂಡ್ ಟಿ ಮತ್ತು ಐಐಟಿ ಮದ್ರಾಸ್ ನ ಇಂಜಿನಿಯರ್ಸ್ ಪರೀಕ್ಷೆ ನಡೆಸಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯ 36ರಿಂದ 40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ.
ದೇವಾಲಯವನ್ನು ತಾಮ್ರ ಬಳಸಿ ನಿರ್ಮಾಣ ಮಾಡಲಾಗುವುದು ಎಂದು ಟ್ರಸ್ಟ್ ಹೇಳಿದ್ದು, ರಾಮಮಂದಿರಕ್ಕೆ ದೊಡ್ಡ ಕಲ್ಲಿನ ಬ್ಲಾಕ್ ಬಳಕೆ ಮಾಡಲಾಗುತ್ತಿದ್ದು, ಕನಿಷ್ಠ ಸಾವಿರ ವರ್ಷದವರೆಗೆ ಬಾಳಿಕೆ ಬರಬೇಕು ಎಂದು ಹೇಳಿದೆ.
ತಾಮ್ರದ ತಗಡು ಕನಿಷ್ಠ 18 ಇಂಚು ಉದ್ದ, 30ಮಿಲಿ ಮೀಟರ್ ಅಗಲ ಹಾಗೂ 3ಮಿಲಿ ಮೀಟರ್ ಇನ್ ಡೆಪ್ತ್ ಇರಬೇಕಾಗಿದೆ. ಇಂತಹ ಹತ್ತು ಸಾವಿರ ತಾಮ್ರದ ತಗಡು (ಪ್ಲೇಟ್ಸ್)ಗಳು ಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ತಾಮ್ರದ ತಗಡನ್ನು ರಾಮಭಕ್ತರು ಮಂದಿರಕ್ಕೆ ದೇಣಿಗೆಯಾಗಿ ನೀಡಬೇಕೆಂದು ಈ ಮೂಲಕ ವಿನಂತಿ ಮಾಡಿಕೊಳ್ಳುವುದಾಗಿ ಟ್ರಸ್ಟ್ ವಿವರಿಸಿದೆ.
ದೇವಾಲಯ ಹಾಗೂ ಫ್ಯಾಮಿಲಿ ಕೂಡಾ ತಾಮ್ರದ ತಗಡು ಕಳುಹಿಸಬಹುದು:
ಒಂದು ವೇಳೆ ರಾಮಮಂದಿರಕ್ಕೆ ತಾಮ್ರದ ತಗಡು ದೇಣಿಗೆಯಾಗಿ ಕೊಡಬೇಕೆಂಬ ಇಚ್ಛೆ ಹೊಂದಿದ್ದರೆ, ಅಂತಹ ಕುಟುಂಬದ ಹೆಸರು, ಸ್ಥಳದ ಹೆಸರು ಅಥವಾ ದೇವಾಲಯಗಳ ಹೆಸರನ್ನು ನಮೂದಿಸಬೇಕು. ಇದರರ್ಥ ತಾಮ್ರದ ತಗಡು ಕೇವಲ ಈ ದೇಶದ ಒಗ್ಗಟ್ಟಿನ ಸಂಕೇತ ಮಾತ್ರವಲ್ಲ, ಆದರೆ ರಾಮಂದಿರ ನಿರ್ಮಾಣಕ್ಕೆ ಇಡೀ ದೇಶದ ಕೊಡುಗೆ ಇದೆ ಎಂಬುದಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದೆ.
ನಿರ್ಮಾಣ ಕಾರ್ಯ ಪರಿಶೀಲನೆಯಲ್ಲಿ ತೊಡಗಿರುವುದು ತುಂಬಾ ಸಂತೋಷವಾಗಿದೆ ಎಂದು ಟ್ರಸ್ಟ್ ಜನರಲ್ ಸೆಕ್ರೆಟರಿ ಚಂಪತ್ ರಾಯ್ ತಿಳಿಸಿದ್ದು, ಸುಮಾರು ಒಂದು ಸಾವಿರ ವರ್ಷಗಳವರೆಗೆ ಬಾಳಿಕೆ ಬರುವ ಮಂದಿರ ನಿರ್ಮಾಣ ಕಾರ್ಯ ನೋಡುವುದು ಭಾಗ್ಯವಾಗಿದೆ. ಎಲ್ ಆ್ಯಂಡ್ ಟಿ ಕಂಪನಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ.
ಮಂದಿರ ನಿರ್ಮಾಣ ಕಾರ್ಯದ ವೇಳೆ ನೆಲದಡಿ 4 ಅಡಿ ಎತ್ತರದ ಹಾಗೂ 11 ಇಂಚು ಉದ್ದದ ಶಿವಲಿಂಗ ಪತ್ತೆಯಾಗಿತ್ತು. ಈ ಶಿವಲಿಂಗ ಸುಮಾರು 12 ಅಡಿ ಆಳದಲ್ಲಿ ಸಿಕ್ಕಿತ್ತು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ ಎಸ್ ವರಿಷ್ಠ ಮೋಹನ್ ಭಾಗವತ್ ಸೇರಿದಂತೆ 176 ಗಣ್ಯಾತೀಗಣ್ಯರು ರಾಮಮಂದಿರ ನಿರ್ಮಾಣ ಕಾರ್ಯದ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.