ಬೆಂಗಳೂರು: ಬೆಂಗಳೂರುನಲ್ಲಿ ಪ್ರಪ್ರಥಮ ಬಾರಿಗೆ ಆರ್ ಅಶೋಕ್ ನೇತೃತ್ವದಲ್ಲಿ ಭಾನುವಾರ ರಾಮ ರಥ ಯಾತ್ರೆ ಸಂಪನ್ನಗೊಂಡಿತು.
ಜಾನಪದ ಕಲಾವಿದರು, ರಾಮಭಕ್ತರು ಸೇರಿದಂತೆ ಸುಮಾರು 8000 ಕ್ಕೂ ಜನರು ರಥ ಯಾತ್ರೆಯಲ್ಲಿ ಪಾಲ್ಗೊಂಡರು. ದಾರಿಯುದ್ದಕ್ಕೂ ರಾಮ ನಾಮದ ಝೇಂಕಾರ ಮುಗಿಲು ಮುಟ್ಟಿತ್ತು. ಜನರು ಸ್ವಯಂಪ್ರೇರಿತರಾಗಿ ಅಲ್ಲಲ್ಲಿ ರಾಮ ರಥಕ್ಕೆ ಪೂಜೆ ಸಲ್ಲಿಸಿದರು. ಪಾನಕ, ಮಜ್ಜಿಗೆ, ಕೂಸಂಬರಿ ವ್ಯವಸ್ಥೆಯನ್ನು ಕಾರ್ಯಕರ್ತರು ಮಾಡಿದ್ದರು.
ಜಾನಪದ ಕಲಾವಿದರು,ಡೊಳ್ಳು ಕುಣಿತ,ಭಜನೆಗಳು ಪಾದಯಾತ್ರೆ ಯಲ್ಲಿ ಭಾಗವಹಿಸಿದವರ ಉತ್ಸಾಹ ಹೆಚ್ಚಿಸಿತ್ತು. ಬಿಟಿಎಮ್ ಬಡಾವಣೆ, ಬಸವನಗುಡಿ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ಹೀಗೆ ಎಲ್ಲ ಕಡೆಯ ಜನರು ರಾಮ ರಥ ಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಮಾರು 6 ಕಿಲೋಮೀಟರ್ ದೂರ ಪಾದಯಾತ್ರೆ ಸಾಗಿಬಂದು ಶಾಸಕರ ಕಚೇರಿಯಲ್ಲಿ ಆರ್ ಅಶೋಕ್ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಮಾಧ್ಯಮದೊಂದಿಗೆ ಮಾತನಾಡಿ ಸಚಿವ ಅಶೋಕ್ “ರಾಮನ ಸಂಕಲ್ಪದಿಂದಲೇ ಇಷ್ಟು ಅಚ್ಚುಕಟ್ಟಾಗಿ ಈ ಯಾತ್ರೆ ಸಾಗಿ ಬಂತು. ಎಲ್ಲ ಧರ್ಮದವರೂ ರಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ರಾಮ ರಾಜ್ಯ ಆಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಇದನ್ನು ಮಾಡಿದ್ದೇನೆ. ಮರ್ಯಾದಾ ಪುರುಷೋತ್ತಮ ಎಂದು ರಾಮನಿಗೆ ಮಾತ್ರ ಹೇಳುತ್ತೇವೆ. ಅವನ ಆದರ್ಶಗಳನ್ನು ನಾವೆಲ್ಲ ಪಾಲಿಸೋಣ. ಪದ್ಮನಾಭನಗರದ ಕಾರ್ಯಕರ್ತರ ಶ್ರಮವೂ ಇದರಲ್ಲಿ ಇದೆ” ಎಂದರು.
ಪಾದಯಾತ್ರೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಆರ್ ಅಶೋಕ್ ಗೆ ಸಾಥ್ ನೀಡಿದರು. ಶಾಸಕರ ಕಚೇರಿಯಲ್ಲಿ ಎಲ್ಲರಿಗೂ ಅಚ್ಚುಕಟ್ಟಾಗಿ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಈಶ್ವರಾನಂದ ಸ್ವಾಮೀಜಿಗಳು, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ , ಆರ್ ಎಸ್ ಎಸ್ ನ ದಕ್ಷಿಣ ಕ್ಷೇತ್ರ ವಾಹಕ ತಿಪ್ಪೇಸ್ವಾಮಿ, ಎ ನಾರಾಯಣ, ತೇಜಸ್ವಿ ಸೂರ್ಯ, ಶಾಸಕ ಎಂ ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.