ಸಿಂಹ ಮಾಸವು ಪ್ರಕೃತಿಯು ಧ್ಯಾನ್ಯ, ಫಲ, ವಸ್ತು ಗಳಿಂದ ಮೈದುಂಬಿ ನಳನಳಿಸುವ ಸಮಯ. ಪೈರು ತಲೆದೂಗುವ ಕಾಲ. ಬಿತ್ತಿದ ಬೀಜಗಳು ಗಿಡ ಬಳ್ಳಿಗಳಲ್ಲಿ ಫಸಲಾಗಿ ತುಂಬಿ ತುಳುಕುವ ಸಮಯ ಕೃಷಿಕರ ಮುಖದಲ್ಲಿ ಸಂತೃಪ್ತಿಯ ಭಾವ ನಲಿದಾಡುವುದನ್ನು ಈ ಸಮಯದಲ್ಲಿ ಕಾಣಬಹುದು.ಅವಿರತ ಪರಿಶ್ರಮಕ್ಕೆ, ಸುರಿಸಿದ ಬೆವರಿಗೆ ಭೂಮಿ ತಾಯಿಯು ಒಲಿದು ಪ್ರಸಾದಿಸಿದ ಧ್ಯಾನ್ಯಗಳು, ತರಕಾರಿಗಳು,ಫಲ ಪುಷ್ಪ ಗಳು ರೈತನಿಗೆ ಹೊಸ ಗೆಲುವನ್ನು ನೀಡುವ ಈ ಸಂದರ್ಭದಲ್ಲಿ ಅವರಿಗೆ ಸಿಗುವ ಗೌರವಾದರಗಳು ಪರಿಶ್ರಮಕ್ಕೆ ಸಿಗುವ ಮನ್ನಣೆ ಎನ್ನಬಹುದು.
Advertisement
ಈ ವಿಶೇಷ ದಿನದಂದು ಕೃಷಿಕ್ಷೇತ್ರದಲ್ಲಿ ಸಾಮರಸ್ಯದ ಬೀಜ ಬಿತ್ತಿ, ಸ್ನೇಹದ ನೀರೆರೆದು ನಗುಸೂಸುವ ಇಬ್ಬರು ರೈತರಿಗೆ ನೀಡುವ ಅಕ್ಷರಗಳ ಗೌರವ ಈ ಲೇಖನ.ನಮ್ಮ ಭಾರತ ದೇಶವು ಜಾತ್ಯತೀತ ರಾಷ್ಟ್ರವಾಗಿದ್ದು ಸಂಸ್ಕೃತಿ ಹಾಗೂ ಸಂಪ್ರದಾಯದಿಂದ ಇಡೀ ಜಗತ್ತಿ ನಲ್ಲಿ ಹೆಸರುವಾಸಿಯಾಗಿದೆ. ನಮ್ಮದು ಕೃಷಿ ಪ್ರಧಾನ ರಾಷ್ಟ್ರ. ದೇಶದ ಬೆನ್ನೆಲುಬಾಗಿರುವ ಕೃಷಿ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ದೇಶದ ಸಂಪತ್ತನ್ನು ಹೆಚ್ಚಿಸಿ ಆ ಮೂಲಕ ಭಾರತೀಯರ ಹಸಿವನ್ನು ನೀಗಿಸಲು ಸಾಧ್ಯವಾಗಿರುವುದು ಸಾರ್ವಕಾಲಿಕ ಸತ್ಯ. ಹಳ್ಳಿಗಳು ನಮ್ಮ ದೇಶದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹೀಗೆ ಹಳ್ಳಿಯ ಜನರಲ್ಲಿ ಸಾಮಾನ್ಯವಾಗಿ ಪ್ರೀತಿ ವಿಶ್ವಾಸ ಹಾಗೂ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದನ್ನು ಕಾಣಬಹುದು.ಸಾಮಾಜಿಕ ಸ್ಥಿತಿ ಗತಿಗಳು ಬದಲಾದರೂ, ಜನ ಸಾಮಾನ್ಯರ ಬದುಕಿನ ಮೇಲೆ ಪ್ರಭಾವ ಬೀರಿದರೂ ಸಾಮರಸ್ಯದ ಜೀವನವನ್ನು ಸಾಗಿಸುತ್ತಾ ಮಾದರಿ ಯಾಗಿ ಬದುಕುತ್ತಿರುವುದು ಕಂಡು ಬರುತ್ತದೆ.
ಮಧೂರು ಪಂಚಾಯತ್ ವ್ಯಾಪ್ತಿಯ ಕೃಷಿ ಭೂಮಿಯೊಂದರಲ್ಲಿ ಜತೆಯಾಗಿ ಕೆಲಸ ನಿರ್ವಹಿಸುತ್ತಿರುವ ನಾರಾಯಣ ಹಾಗೂ ಮೊಹಮ್ಮದ್ ಈ ಈರ್ವರೂ ಕೂಡ ಪ್ರತ್ಯೇಕವಾಗಿ ಮೊದಲು ಈ ಕಾಯಕದಲ್ಲಿ ತೊಡಗಿದ್ದರು. ಅನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಈ ಕಾಯಕವನ್ನು ಕೈ ಬಿಡಬೇಕಾಗಿ ಬಂತು. ಈಗ ಈ ಇಬ್ಬರು ಕೃಷಿಕರು ಜತೆಯಾಗಿ ಮಧೂರು ಪ್ರದೇಶದಲ್ಲಿ ಕೃಷಿಯೋಗ್ಯ ಭೂಮಿಯನ್ನು ಗೇಣಿಗೆ ಪಡೆದು ಜತೆಯಾಗಿ ತರಕಾರಿ ಬೆಳೆಯುತ್ತಿದ್ದಾರೆ. ಸುಮಾರು ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಬೆಂಡೆ, ತೊಂಡೆ, ಮುಳ್ಳುಸೌತೆ, ಹೀರೆಕಾಯಿ, ಹಾಗಲ ಕಾಯಿಯನ್ನು ಹಾಗೂ ಇನ್ನಿತರ ತರಕಾರಿಗಳನ್ನು ಬೆಳೆಸುತ್ತಾರೆ.
ಈ ವರ್ಷ ಮಳೆಯು ಅನುಕೂಲವಾಗಿದ್ದುದರಿಂದ ಉತ್ತಮ ಫಸಲು ಬಂದಿರುವುದಾಗಿ ಅವರು ಹೇಳು ತ್ತಾರೆ. ಈ ಪ್ರದೇಶದಲ್ಲಿ ಕೀಟಬಾಧೆೆಯೂ ಕಡಿಮೆ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಬೇಕಾಗಿ ಬರುವುದಿಲ್ಲ ಎಂಬುದು ಅವರ ಅನುಭವದ ಮಾತು ಇಲ್ಲಿ ಬೆಳೆದ ತರಕಾರಿಗಳನ್ನು ಗದ್ದೆಯಿಂದಲೇ ಜನರು ಕೊಂಡುಕೊಳ್ಳುತ್ತಾರೆ. ಮಿಕ್ಕು ಳಿದ ತರಕಾರಿಗಳನ್ನು ಸಮೀಪದಲ್ಲಿರುವ ಅಂಗಡಿಗಳಲ್ಲಿ ಮಾರಾಟಮಾಡಲಾಗುತ್ತದೆ. ಹಾಗಾಗಿ ಇವರು ಬೆಳೆದ ತರಕಾರಿ ಇನ್ನೂ ಕಾಸರಗೋಡು ಮಾರುಕಟ್ಟೆ ತಲುಪಿಲ್ಲ. ಕೃಷಿ ಇಲಾಖೆಯಿಂದ ಕೊಡಲ್ಪಡುವ ಗೊಬ್ಬರವನ್ನು ಹಾಗೂ ಕೋಳಿ ಗೊಬ್ಬರ ಮತ್ತು ಇತರ ಸಾವಯವ ಗೊಬ್ಬರಗಳನ್ನು ಮಾತ್ರ ಬಳಸಿ ಉತ್ತಮ ಮಟ್ಟದ ಫಸಲು ಪಡೆಯುತ್ತಿರುವುದು ಮಾದರಿಯಾಗಿದೆ.