ಹೊಸದಿಲ್ಲಿ : ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ ನಾಥ್ ಕೋವಿಂದ್ ಅವರು ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ನಾಳೆ, ಜೂನ್ 23ರ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಇತರ ಎಲ್ಲ ಉನ್ನತ ನಾಯಕರ ಸಮಕ್ಷಮ, ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
ಎಲ್ಲ ಬಿಜೆಪಿ ಮುಖ್ಯಮಂತ್ರಿಗಳು, ಮತ್ತು ಬಿಜೆಪಿ ಮಿತ್ರ ಪಕ್ಷಗಳ ಮುಖ್ಯಮಂತ್ರಿಗಳು ಶುಕ್ರವಾರ ಕೋವಿಂದ್ ಅವರು ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಸಂಬಂಧಿಸಿ ಲೋಕಸಭೆಯ ಮಹಾಕಾರ್ಯದರ್ಶಿ, ನಿರ್ವಚನ ಅಧಿಕಾರಿ ಕೂಡ ಆ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಬಿಜೆಪಿಯು ಕೋವಿಂದ್ ಅವರ ನಾಲ್ಕು ಸೆಟ್ಟುಗಳ ನಾಮಪತ್ರವನ್ನು ಸಿದ್ಧಪಡಿಸಿರುವುದಾಗಿ ತಿಳಿದುಬಂದಿದೆ.
ರಾಷ್ಟ್ರಪತಿ ಚುನಾವಣೆ ಜುಲೈ 17ರಂದು ನಡೆಯಲಿದ್ದು ಜು.20ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಜು.25ರಂದು ಈಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಕಾರ್ಯಾವಧಿ ಮುಗಿಯಲಿದ್ದು ಅಂದು ಅವರು ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.