ಅಯೋಧ್ಯ: ‘ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. 2019 ರ ಲೋಕಸಭಾ ಚುನಾವಣೆಯ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ.ಅಲ್ಲಿಯವರೆಗೆ ತಾಳ್ಮೆಯಿಂದಿರಿ ‘ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ ಸಮ್ಮೇಳನದಲ್ಲಿ ಸ್ವಾಮೀಜಿಗಳಿಗೆ ನೀಡಿದ ಭರವಸೆ.
ಸಂತ ಸಮ್ಮೇಳನ ದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ‘ನಾವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಅದರದ್ದೇ ಕಾರ್ಯಗಳನ್ನು ಹೊಂದಿದ್ದು ನಾವು ಅದನ್ನು ಮನಸ್ಸಿನಲ್ಲಿರಿಸಿಕೊಳ್ಳಬೇಕಾಗಿದೆ’ ಎಂದರು.
‘ಮರ್ಯಾದಾ ಪುರುಷೋತ್ತಮ ರಾಮ ವಿಶ್ವಕ್ಕೆ ಆದರ್ಶ ಪುರುಷ. ಅವನ ದಯೆ ಇದ್ದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತದೆ.ಅದರಲ್ಲಿ ಅನುಮಾನ ಬೇಡ’ ಎಂದರು.
ಸದ್ಯ ವಿಶ್ವ ಹಿಂದು ಪರಿಷದ್ ಮತ್ತೆ ರಾಮಮಂದಿರ ನಿರ್ಮಾಣಕ್ಕಾಗಿ ಆಂದೋಲನ ನಡೆಸಲು ಮುಂದಾಗಿದೆ.
ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು ಮೂರು ನಾಲ್ಕು ತಿಂಗಳಿನೊಳಗೆ ತೀರ್ಪು ಬರದಿದ್ದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ವಿಎಚ್‌ಪಿ ಹೇಳಿದೆ.