Advertisement

Ram Mandir; ಮಂಗಳೂರು ನಗರ ಸಹಿತ ದ.ಕ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್

10:47 PM Jan 20, 2024 | Team Udayavani |

ಉಡುಪಿ/ಮಂಗಳೂರು: ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದ್ದು, ಕರಾವಳಿಯಾದ್ಯಂತ ಆ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಸಿದ್ಧತೆ ನಡೆಯುತ್ತಿದೆ.
ಬಹುಪಾಲು ಎಲ್ಲ ದೇವಸ್ಥಾನ, ಶ್ರೀರಾಮ ಭಜನ ಮಂದಿರ, ವಿವಿಧ ಯುವಕ, ಯುವತಿ ಮಂಡಳಿಗಳಲ್ಲೂ ಪ್ರಾಣಪ್ರತಿಷ್ಠೆಯ ಲೈವ್‌ ವೀಕ್ಷಣೆಗೆ ಬೇಕಾದ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಅಂದು ಬೆಳಗ್ಗಿನಿಂದಲೇ ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಸ್ಥಾನಗಳಲ್ಲಿ ತಯಾರಿ ನಡೆಯುತ್ತಿದೆ.

Advertisement

ಶ್ರೀ ರಾಮೋತ್ಸವದ ಹೆಸರಿನಲ್ಲಿ ಜಿಲ್ಲಾದ್ಯಂತ ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಶ್ರೀ ರಾಮ ಭಜನೆ, ಶ್ರೀ ರಾಮ ದೇವರ ನಾಮ ಸ್ಮರಣೆ, ಶ್ರೀರಾಮ ದೀಪೋತ್ಸವ, ರಂಗಪೂಜೆ, ಸಮೂಹಿಕ ಪ್ರಾರ್ಥನೆ, ಶ್ರೀರಾಮ ದೇವರ ಪಟ್ಟಾಭಿಷೇಕ, ರಾಮಕಥಾ ಗಾಯನ, ಹರಿಕಥಾ, ರಾಮತಾರಕ ಮಂತ್ರ ಹವನ ಇತ್ಯಾದಿ ದೇವಸ್ಥಾನಗಳಲ್ಲಿ ನಡೆಯಲಿದೆ. ಬಹುಪಾಲು ದೇವಸ್ಥಾನ, ಭಜನ ಮಂದಿರಗಳಲ್ಲಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನದ ಅನ್ನಸಂತರ್ಪಣೆಯೂ ಇರಲಿದೆ.

ಬಿಗಿ ಬಂದೋಬಸ್ತ್
ಮಂಗಳೂರು: ಶ್ರೀರಾಮ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ವಿಶೆಷ ನಿಗಾ ಇಡಲಾಗಿದೆ.

ಮಂಗಳೂರು ನಗರದಲ್ಲಿ ದೇವಸ್ಥಾನ ಮತ್ತು ಮಂದಿರಗಳಲ್ಲಿ ಒಟ್ಟು 196 ಕಡೆಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಗುರುತಿಸಲಾಗಿದೆ. 131 ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಕಣ್ಗಾವಲಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಗರದಾದ್ಯಂತ 57 ಸೆಕ್ಟರ್‌ ಮೊಬೈಲ್‌ಗ‌ಳನ್ನು ಹಗಲು-ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆಯನ್ನು ಮಾಡಲಾಗಿದೆ. 14 ಸ್ಥಳಗಳಲ್ಲಿ ಚೆಕ್‌ ಪಾಯಿಂಟ್‌ ತೆರೆಯಲಾಗಿದೆ. 9 ಸಿಎಆರ್‌ ಮತ್ತು 3 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ತಡರಾತ್ರಿ ಮತ್ತು ಮುಂಜಾನೆ ವಿಶೇಷ ಗಸ್ತು ಇರಲಿದೆ. ಮಂಗಳೂರು ನಗರದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವಿದ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸ್‌ ಕಮಿಷನ ರೆಟ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೆರವಣಿಗೆ, ರ್ಯಾಲಿಗಳಿಗೆ ಅನುಮತಿ ನೀಡಿರುವುದಿಲ್ಲ. ಮದ್ಯ ಮಾರಾಟ ಬಂದ್‌ ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಜ. 21ರ ಮಧ್ಯರಾತ್ರಿಯಿಂದ ಜ. 23ರ ಮುಂಜಾನೆಯ ವರೆಗೆ ನಗರದಲ್ಲಿರುವ ಎಲ್ಲ ರೀತಿಯ ಬಾರ್‌ಗಳು ಮತ್ತು ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಕಮಿಷನರೆಟ್‌ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 3 ಡಿಸಿಪಿ, 6 ಎಸಿಪಿ, 11 ಪಿಐ ಮತ್ತು 37 ಪಿಎಸ್‌ಐ ದರ್ಜೆಯ ಅಧಿಕಾರಿಗಳನ್ನು ಹಾಗೂ 781 ಪೊಲೀಸ್‌ ಸಿಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next