Advertisement

ರಾಮ ಮಂದಿರಕ್ಕೆ ದಿಲ್ಲಿಯಿಂದ ಹಳ್ಳಿ ವರೆಗಿನವರ ಸಹಕಾರ ಅಗತ್ಯ

01:10 AM Dec 21, 2020 | mahesh |

ಉಡುಪಿ: ಎಲ್ಲರ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ನಾವು ದಿಲ್ಲಿಯ ನಾಯಕರಿಂದ ತೊಡಗಿ ಹಳ್ಳಿಯ ಜನಸಾಮಾನ್ಯರ ತನಕ ಎಲ್ಲರ ಸಹಕಾರ ಕೋರುತ್ತಿದ್ದೇವೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ತಿಳಿಸಿದರು.

Advertisement

ಕೊಡವೂರು ಪಾಳೆಕಟ್ಟೆಯ ಮೂಕಾಂಬಿಕಾ ಭಜನ ಮಂದಿರ, ಬಬ್ಬುಸ್ವಾಮಿ ದೈವಸ್ಥಾನಕ್ಕೆ ರವಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಶ್ರೀಗಳು ಬಳಿಕ ದಲಿತರ ಮನೆಗಳಲ್ಲಿ ರಾಮಮಂದಿರ ಕುರಿತು ನಿಧಿ ಸಂಗ್ರಹ ಅಭಿಯಾನದಲ್ಲಿ ಸಾಂಕೇತಿಕವಾಗಿ ರಾಮದೀಪವನ್ನು ಬೆಳಗಿಸಿ ಮಾತನಾಡಿದರು.

ರಾಮ ಮಂತ್ರೋಪದೇಶ ನಿಧಿ ಸಂಗ್ರಹ, ರಾಮಮಂದಿರ ನಿರ್ಮಾಣವಾಗುವ ಜತೆಗೆ ರಾಮರಾಜ್ಯ ನಿರ್ಮಾಣವಾಗಬೇಕು. ದೇಶದ ಪುನರುತ್ಥಾನವಾಗಬೇಕು. ಇದಕ್ಕಾಗಿ ರಾಮನ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಹೀಗಾಗಬೇಕಾದರೆ ನಿತ್ಯ ರಾಮನ ಸ್ಮರಣೆ ಮಾಡಬೇಕು ಎಂದ ಸ್ವಾಮೀಜಿ “ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ| ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ’ ಎಂಬ ಮಂತ್ರವನ್ನು ಉಪದೇಶಿಸಿದರು.

ಅಳಿಲಿನ ಸೇವೆ ರೀತಿ…
ರಾಮನು ಸೇತುವೆ ಕಟ್ಟುವಾಗ ಅಳಿಲು ಕೂಡ ಪರಿಪೂರ್ಣವಾಗಿ ಸೇವೆ ಸಲ್ಲಿಸಿದಂತೆ ನಾವೂ ಕೂಡ 10 ರೂ.ಗಳಿಂದ
ಹಿಡಿದು 10,000 ರೂ. ತನಕ ಯಥಾಶಕ್ತಿ ದೇಣಿಗೆ ನೀಡಬೇಕು. ಯಾರೋ ಒಬ್ಬರು ಧನಿಕರು ಮಂದಿರ ನಿರ್ಮಿಸಿದರೆ ರಾಮ ಮಂದಿರವಾಗುವುದಿಲ್ಲ. ರಾಮನಾದರೋ ಒಬ್ಬ ಪ್ರಭು. ಈಗ ಪ್ರಜೆಗಳೆಲ್ಲ ಪ್ರಭುಗಳು. ಎಲ್ಲ ಪ್ರಜೆಗಳ ಸಹಕಾರದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದರು.

ಜ. 15ರಿಂದ ನಿಧಿ ಸಂಗ್ರಹ ಅಭಿಯಾನ ನಡೆಯಲಿದ್ದು ವಿಹಿಂಪ ಕಾರ್ಯಕರ್ತರು ಬಂದಾಗ ಸಹಕರಿಸಬೇಕು ಎಂದರು.
ರವಿ ಕರ್ಕೇರ ಮತ್ತು ಸದಾನಂದರ ಮನೆಯಲ್ಲಿ ದೀಪ ಬೆಳಗಿಸಲಾಯಿತು. ನಗರಸಭಾ ಸದಸ್ಯ ವಿಜಯ ಕೊಡವೂರು, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಸುಂದರ ಮೇಸ್ತ್ರಿ, ಜಯ ಸಾಲ್ಯಾನ್‌, ಮಾಧವ ಕರ್ಕೇರ, ಜೀವನ್‌ ಪಾಳೆಕಟ್ಟೆ, ವಾಸುದೇವ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next