ವಿಜಯಪುರ ; ಅಯೋಧ್ಯೆಯ ರಾಮ ಮಂದಿರ ಲೋರ್ಕಾಣೆಯ ಐತಿಹಾಸಿಕ ಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಸುಕೃತ. ಅಯೋಧ್ಯೆಯಲ್ಲಿನ ಪ್ರಸ್ತುತ ಸ್ಥಿತಿ ಅವಲೋಕಿಸಿದರೆ ಸ್ವರ್ಗವೇ ಸೃಷ್ಟಿಯಾಗಿದೆ.ಸತ್ತು ಸ್ವರ್ಗ ನೋಡಬೇಕು, ಇದ್ದು ಅಯೋಧ್ಯೆ ನೋಡಬೇಕು.
ಇದು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ, ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನಿತರಾಗಿ ತೆರಳಿರುವ ವಿಜಯಪುರದ ತೊರವಿ ತಾಂಡಾ ಗೋಪಾಲ ಮಹಾರಾಜರ ಅನುಭವದ ಪ್ರತಿಕ್ರಿಯೆ.
ರಾಮ ಮಂದಿರ ಟ್ರಸ್ಟ್ ನ ಅಧಿಕೃತ ಆಹ್ವಾನದ ಮೇರೆಗೆ ಅಯೋಧ್ಯೆಗೆ ಆಗಮಿಸಿದ್ದ ನಮಗೆ ಇಲ್ಲಿ ಅತ್ಯಂತ ಗೌರಯುತ ಆದರಾತಿಥ್ಯ ಸಿಕ್ಕಿದೆ. ಐದು ವರ್ಷದ ಹಿಂದೆ ಬಂದಿದ್ದಾಗ ಇಲ್ಲಿ ಏನೂ ಇರಲಿಲ್ಲ. ಇದೀಗ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸ್ವರ್ಗವೇ ಮರು ಸೃಷ್ಟಿಯಾಗಿದೆ. ಉತ್ತರ ಪ್ರದೇಶ ಸರ್ಕಾರ ಇಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಎಲ್ಲ ಸಂತರು, ಶರಣರು, ಮಠಾಧೀಶರಿಗೆ ವಸತಿ, ಪೂಜಾ ಕೈಂಕರ್ಯಗಳಿಗೆ ವ್ಯವಸ್ಥೆ, ಪೊಲೀಸ್ ಭದ್ರತೆ, ಆತಿಥ್ಯ ಹೀಗೆ ಎಲ್ಲವನ್ನೂ ಅತ್ಯಂತ ಅಚ್ಚಕಟ್ಟಾಗಿ ನೆರವೇರಿಸಿದ್ದಾರೆ.
ಹಿಂದೂ ಸನಾತನ ಹಿಂದೂ ಧರ್ಮದ ಸಂರಕ್ಷಣೆಗೆ ಆಯೋಧ್ಯೆಯ ರಾಮ ಮಂದಿರ ಪ್ರೇರಕ ಶಕ್ತಿಯಾಗಿ ಭಾರತೀಯರಲ್ಲಿ ಧಾರ್ಮಿಕ ಭಾವನೆಗಳನ್ನು ಜಾಗೃತಿ ಮೂಡಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ನಾಸ್ತಿಕರಲ್ಲೂ ಕೂಡ ಆಸ್ತಿಕ ಭಾವ ಸೃಷ್ಟಿಸುವಲ್ಲಿ ಅಯೋಧ್ಯೆ ಆಕರ್ಷಕ ಶಕ್ತಿ ಹೊಂದಿದೆ ಎಂದು ಬಣ್ಣಿಸಿದರು.