ಉತ್ತರಪ್ರದೇಶ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಳೆದ 44 ದಿನಗಳಿಂದ ನಡೆಯುತ್ತಿದ್ದ ದೇಣಿಗೆ ಸಂಗ್ರಹ ಅಭಿಯಾನ ಇಂದು (ಫೆ.27) ಮುಕ್ತಾಯಗೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ಗಿರಿ, ದೇಶ್ಯಾದ್ಯಂತ ನಡೆದ ಅಭಿಯಾನ ಇಂದಿಗೆ ಸಂಪನ್ನಗೊಂಡಿದೆ. ಇದುವರೆಗೆ ಮಂದಿರ ನಿರ್ಮಾಣಕ್ಕೆ ಸಂಗ್ರಹಗೊಂಡ 1900 ಕೋಟಿ ರೂ.ಗಳನ್ನು ಶ್ರೀ ರಾಮಲಲ್ಲಾ ಬ್ಯಾಂಕ್ ಖಾತೆಯಲ್ಲಿ ಜಮಾಮಾಡಲಾಗಿದೆ. ಇನ್ನೂ ಕೆಲವೊಂದು ಚೆಕ್ ಗಳ ಬ್ಯಾಂಕ್ ಕ್ಲಿಯರೆನ್ಸ್ ಪ್ರಗತಿಯಲ್ಲಿರುವುದರಿಂದ ಒಟ್ಟು ಮೊತ್ತ 2000 ಕೋಟಿ ದಾಟಬಹುದು ಎಂದಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯ ಡಾ.ಅನಿಲ್ ಮಿಶ್ರಾ ಮಾತನಾಡಿ, ದೇಣಿಗೆ ಸಂಗ್ರಹದ ಒಟ್ಟು ಮೊತ್ತ 2500 ಕೋಟಿ ದಾಟಬಹುದು ಎಂದು ಅಂದಾಜಿಸಿದ್ದಾರೆ. ಅಭಿಯಾನ ತಡವಾಗಿ ಶುರುವಾದ ಕೆಲವೊಂದು ರಾಜ್ಯಗಳಲ್ಲಿ ಇನ್ನೂ ದೇಣಿಗೆ ಸಂಗ್ರಹವಾಗಬಹುದು ಎಂದಿದ್ದಾರೆ.
ಜನವರಿ 14,2021 ರಿಂದ ಇಡೀ ದೇಶ್ಯಾದ್ಯಂತ ರಾಮಮಂದಿರ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು. 44 ದಿನಗಳ ಕಾಲ ಯಶಸ್ವಿಯಾಗಿ ಅಭಿಯಾನ ಜರುಗಿತು. ರಾಮನ ಮಂದಿರ ನಿರ್ಮಾಣಕ್ಕೆ ಧರ್ಮ,ಜಾತಿ, ಪಂಗಡಗಳ ಮೀರಿ ಜನ ದೇಣಿಗೆ ನೀಡಿದ್ದಾರೆ. ಇದು ರಾಮನ ಮೇಲೆ ದೇಶದ ಜನರಿಗಿರುವ ಭಕ್ತಿ, ನಂಬಿಕೆ ಎಂದು ಮಿಶ್ರಾ ಹೇಳಿದ್ದಾರೆ.
ಇನ್ನು ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 250 ಕೋಟಿ ರೂ. ಅನುದಾನ ನೀಡಿದೆ. ಮಂದಿರ ನಿರ್ಮಾಣಕ್ಕೆ ಬೇಕಾಗುವ ಹಣ ಅಭಿಯಾನದ ಮೂಲಕ ಸಂಗ್ರಹಿಸಲು ಟ್ರಸ್ಟ್ ನಿರ್ಧರಿಸಿತ್ತು.