ವಾಷಿಂಗ್ಟನ್: ರಘುರಾಮನ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಗಳಿಗೆಯನ್ನು ಬರೀ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಮೂಲೆಮೂಲೆಯಲ್ಲಿ ಸಂಭ್ರಮಿಸಲಾಗಿದೆ.
ಅಮೆರಿಕದಲ್ಲಂತೂ ಈ ಸಂಭ್ರಮ ಸ್ವಲ್ಪ ಜಾಸ್ತಿಯೇ ಇತ್ತು.
ಕೋವಿಡ್ 19 ಇರುವ ಕಾರಣ ಸಾರ್ವಜನಿಕ ಸಭೆಗಳು ನಡೆಯಲಿಲ್ಲ. ಬಹುತೇಕರು ತಮ್ಮ-ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ರಾಮಪೂಜೆ ಮಾಡಿದರು. ವಿಶೇಷವೆನಿಸಿದ್ದು ನ್ಯೂಯಾರ್ಕ್ನ ಟೈಮ್ಸ್‌ಸ್ಕ್ವೇರ್‌ನಲ್ಲಿ ಹಾಕಲಾಗಿದ್ದ ಬೃಹತ್ ಪರದೆ.
ಅದರಲ್ಲಿ ರಾಮನ ಚಿತ್ರಗಳು, ಅಯೋಧ್ಯೆ ರಾಮ ಮಂದಿರದ ಚಿತ್ರಗಳು ಮೂಡಿ ಬರುತ್ತಿದ್ದವು. ಸಂಭ್ರಮಾಚರಣೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಮೆರಿಕ ಶಾಖೆ ಮುಖ್ಯಪಾತ್ರ ವಹಿಸಿತ್ತು.
ವಾಷಿಂಗ್ಟನ್‌ನಲ್ಲಿ ವಿಹಿಂಪ ಸದಸ್ಯರು ಟ್ರಕ್ಕನ್ನೇ ಸ್ತಬ್ಧ ಚಿತ್ರದಂತೆ ಬದಲಿಸಿದ್ದರು. ಇಡೀ ವಾಷಿಂಗ್ಟನ್ ನಗರಪೂರ್ಣ ಅದು ಸಂಚರಿಸಿತು.
ಆ ಟ್ರಕ್‌ನ ಡಿಜಿಟಲ್ ಪರದೆಯಲ್ಲಿ ಶ್ರೀರಾಮ ಮಂದಿರದ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಇನ್ನು ಜೈ ಶ್ರೀರಾಮ್ ಎನ್ನುವ ಕೂಗಂತೂ ಮೇರೆ ಮೀರಿತ್ತು.