ವಿಜಯಪುರ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಸವನಾಡಿನ ಬಂಜಾರಾ ಧರ್ಮಗುರು ಗೋಪಾಲ ಮಹಾರಾಜರಿಗೆ ಅಧಿಕೃತ ಆಹ್ವಾನ ಬಂದಿದೆ.
ಜ.22 ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ ಲೋಕಾರ್ಪಣೆ, ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಎಲ್.ಟಿ.-1 ತಾಂಡಾದಲ್ಲಿರುವ ಬಂಜಾರಾ ಧರ್ಮಗುರು ಗೋಪಾಲ ನಂದುದಾಲ ಮಹಾರಾಜರಿಗೆ ಅಧಿಕೃತ ಆಹ್ವಾನ ಬಂದಿದೆ.
ಶ್ರೀರಾಮ ಮಂದಿರ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್‍ಬಂದಿರುವ ವರಿಂದ ಬಂದಿರುವ ಲಿಖಿತ ಪತ್ರ ಹಾಗೂ ಆಹ್ವಾನ ಪತ್ರಿಕೆಯಲ್ಲಿ ಗೋಪಾಲ ಮಹಾರಾಜರು ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.
ಶ್ರೀರಾಮ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಗೋಪಾಲ ಮಹಾರಾಜರು, ರಾಮ ಮಂದಿರ ಲೋಕಾರ್ಪಣೆಯಂಥ ಐತಿಹಾಸಿಕ ಸಮಾರಂಭಕ್ಕೆ ನಮಗೆ ಆಹ್ವಾನ ನೀಡುವ ಮೂಲಕ ಬಂಜಾರ ಸಮಾಜಕ್ಕೂ ಪ್ರಾತಿನಿಧ್ಯ ನೀಡಿರುವುದ ಸಂತಸ ತಂದಿದೆ ಎಂದಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿ ತಾಂಡಾ ಎಲ್.ಟಿ.ನಂ.1 ದಿಂದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸೌಭಾಗ್ಯ. ಸಂತ ಸೇವಾಲಾಲ ಮಹಾರಾಜರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶೀರ್ವಾದವೇ ಕಾರಣ ಎನ್ನಲು ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಶ್ರೀರಾಮನ ಭಕ್ತನಾಗಿ ಆಯೋಧ್ಯೆಗೆ ತೆರಳಲು ಕಾತರನಾಗಿದ್ದು, ಸದರಿ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ ಆಯೋಧ್ಯೆಯ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಸಮಿತಿಗೆ ಕೃತಜ್ಞತೆ ಹಾಗೂ ಸಮಸ್ತ ಶ್ರೀರಾಮ ಭಕ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.