ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಅದರ ಹಿರಿಮೆ ಮೈಸೂರಿಗೂ ಸಂದಿದೆ. ಇಲ್ಲಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಶ್ರೀರಾಮ ಮಂದಿರದ ಮೂಲ ವಿಗ್ರಹವನ್ನಾಗಿ ಆಯ್ಕೆ ಮಾಡಲಾಗಿದ್ದು, ಕುಟುಂಬ ಸದಸ್ಯರಲ್ಲಿ ಸಂಭ್ರಮ ಮನೆ ಮಾಡಿದೆ.
ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಶ್ರೀರಾಮ ಮಂದಿರದ ಮೂಲ ವಿಗ್ರಹ ಕೆತ್ತನೆ ಕಾರ್ಯವನ್ನು ಶಿಲ್ಪಿ ಅರುಣ್ ಯೋಗಿರಾಜ್ ಪೂರ್ಣಗೊಳಿಸಿದ್ದು, ತಿಂಗಳ ಹಿಂದೆಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಂಡಳಿಗೆ ಹಸ್ತಾಂತರಿಸಿದ್ದರು. ಟ್ರಸ್ಟ್ ಮೂರು ಶಿಲ್ಪಿಗಳಿಗೆ ರಾಮಲಲ್ಲಾನ ವಿಗ್ರಹದ ಕೆತ್ತನೆ ಕಾರ್ಯ ವಹಿಸಿತ್ತು.
“ನನಗೆ ನೀಡಿದ ವಿನ್ಯಾಸದ ಆಧಾರದಲ್ಲಿ ಪ್ರತಿಮೆಯನ್ನು ಕಪ್ಪು ಶಿಲೆಯಲ್ಲಿ ನನ್ನ ಕೈಗಳಿಂದಲೇ ವಿಗ್ರಹವನ್ನು ಸೂಕ್ಷ್ಮವಾಗಿ ಕೆತ್ತಿದ್ದೇನೆ. ಯಾವುದೇ ಯಂತ್ರವನ್ನು ಬಳಸಿಲ್ಲ. ಮೂರ್ತಿಯಲ್ಲಿ ಬಿಲ್ಲು ಬಾಣ ಇಡಲು ಸಹಕಾರಿಯಾಗುವಂತೆ ಸಿದ್ಧಪಡಿಸಲಾಗಿದ್ದು, ದೈವಿಕ ಪ್ರಾತಿನಿಧ್ಯಕ್ಕೆ ಐಶ್ವರ್ಯದ ಸ್ಪರ್ಶವನ್ನು ನೀಡಲಾಗಿದೆ’ ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.
ರಾಮಜನ್ಮ ಭೂಮಿ ಟ್ರಸ್ಟ್ ನನ್ನ ಮಗ ಕೆತ್ತಿರುವ ವಿಗ್ರಹವನ್ನು ಅಂತಿಮಗೊಳಿಸಿರುವ ವಿಚಾರ ಕೇಳಿಖುಷಿ ಆಯಿತು. ನನ್ನ ಮಗ ತನ್ನ ಕೆಲಸಕ್ಕೆ ಜೀವ ತುಂಬಿದ್ದಾನೆ. ನಮ್ಮನ್ನು ಸಮಾಜದಲ್ಲಿ ತಲೆ ಎತ್ತುವಂತೆ ಮಾಡಿದ್ದಾನೆ. ಅವನ ತಾತ ಮತ್ತು ಅಪ್ಪನ ಆಶೀರ್ವಾದದಿಂದ ಇದೆಲ್ಲ ಸಾಧ್ಯವಾಗಿದೆ. ನಾವೂ ರಾಮನನ್ನು ನೋಡಲು ಅಯೋಧ್ಯೆಗೆ ಹೋಗುತ್ತೇವೆ.
– ಸರಸ್ವತಿ, ಶಿಲ್ಪಿ ಅರುಣ್ ಯೋಗಿರಾಜ್ ತಾಯಿ