ಹೊಸದಿಲ್ಲಿ: ಸುದೀರ್ಘ 7 ದಶಕಗಳ ವಕೀಲಿ ವೃತ್ತಿ ನಡೆಸಿದ 96 ರ ಹರೆಯದ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಅವರು ಶನಿವಾರ ನಿವೃತ್ತಿ ಘೋಷಿಸಿದ್ದಾರೆ.
ಮಾಜಿ ಬಿಜೆಪಿ ನಾಯಕ ನಿವೃತ್ತಿ ವೇಳೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ‘ಕೇಂದ್ರ ಸರ್ಕಾರದ ಪ್ರಸ್ತುತ ಸ್ಥಿತಿ ವಿಪತ್ತು’ ಎಂದು ದೂರಿದ್ದಾರೆ.
ಬಾರ್‌ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಸುಪ್ರೀಂಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜೇಠ್ಮಲಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ವೃತ್ತಿಯಿಂದ ನಿವೃತ್ತನಾಗುತ್ತಿದ್ದೇನೆ ಎಂದು ಹೇಳಲು ಇಲ್ಲಿದ್ದೇನೆ. ಆದರೆ ನಾನು ಜೀವಂತವಾಗಿ ಇರುವವರೆಗೂ ಹೊಸ ಪಾತ್ರವನ್ನು ವಹಿಸುತ್ತೇನೆ. ಅಧಿಕಾರದ ಸ್ಥಾನಕ್ಕೆ ಬಂದಿರುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಟ ಮುಂದುವರಿಸಲು ನಾನು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಭಾರತದ ಸ್ಥಿತಿಯು ಉತ್ತಮ ಆಕಾರವನ್ನು ಪಡೆಯುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ವಿರುದ್ಧವೂ ವಾಗ್ಧಾಳಿ ನಡೆಸಿದ ಜೇಠ್ಮಲಾನಿ ‘ಯುಪಿಎ ಸರ್ಕಾರದಂತೆ ಮೋದಿ ಸರ್ಕಾರವೂ ದೇಶದ ಜನತೆಯನ್ನು ನಿರಾಸೆ ಮಾಡಿದೆ’ ಎಂದಿರುವುದಾಗಿ ವರದಿಯಾಗಿದೆ.