ಹೊಸದಿಲ್ಲಿ: ಪದೇ ಪದೇ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕುವ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಕುರಿತು ‘ಮಹಾಭಾರತ’ ಉಲ್ಲೇಖವಿರುವ ವಿವಾದಾತ್ಮಕ ಟ್ವೀಟ್‌ಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
“ದ್ರೌಪದಿಯು ರಾಷ್ಟ್ರಪತಿಯಾಗಿದ್ದರೆ ಪಾಂಡವರು ಯಾರು? ಮತ್ತು ಮುಖ್ಯವಾಗಿ ಕೌರವರು ಯಾರು?” ಎಂದು ಆರ್.ಜಿ.ವಿ ಟ್ವೀಟ್ ಮಾಡಿದ್ದು, ವಿವಾದ ರೂಪ ಪಡೆದಿದೆ.
ತೆಲಂಗಾಣ ಬಿಜೆಪಿ ನಾಯಕ ಗುಡೂರು ನಾರಾಯಣ ರೆಡ್ಡಿ ಅವರು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ವರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ. “ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನಮಗೆ ಭರವಸೆ ನೀಡಿದ್ದಾರೆ, ಅದರ ನಂತರ, ಅವರು ಮತ್ತೆ ಟ್ವೀಟ್ ಅಥವಾ ಯಾರ ವಿರುದ್ಧವೂ ಇಂತಹ ಅಸಹ್ಯ ಹೇಳಿಕೆ ನೀಡುತ್ತಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ:ನಾಲೆಗೆ ಬಿದ್ದ ಕೂಲಿ ಕೆಲಸಗಾರರಿದ್ದ ಕ್ರೂಸರ್: ಸ್ಥಳದಲ್ಲೇ ಏಳು ಜನರ ಸಾವು, ಮೂವರು ಗಂಭೀರ
ತನ್ನ ಟ್ವೀಟ್ ವಿವಾದ ರೂಪ ಪಡೆಯುತ್ತಿದ್ದಂತೆ ಆರ್.ಜಿ.ವಿ ಸ್ಪಷ್ಟನೆ ನೀಡಿದ್ದಾರೆ. “ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರವಾಗಿದೆ. ಆದರೆ ಹೆಸರು ಅಪರೂಪವಾಗಿರುವುದರಿಂದ ನಾನು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ” ಎಂದಿದ್ದಾರೆ.
ತೆಲಂಗಾಣದ ಮತ್ತೊಬ್ಬ ಬಿಜೆಪಿ ಶಾಸಕ ರಾಮ್ ಗೋಪಾಲ್ ವರ್ಮಾ ಅವರನ್ನು ಟೀಕಿಸಿದ್ದು, ನಿರ್ದೇಶಕರು “ಕುಡಿದು ನಶೆಯ ಸ್ಥಿತಿಯಲ್ಲಿ ಇಂತಹ ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಇಂತಹ ವಿವಾದಾತ್ಮಕ ಕಾಮೆಂಟ್ ಗಳನ್ನು ಮಾಡುವ ಮೂಲಕ ವರ್ಮಾ ಯಾವಾಗಲೂ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ” ಎಂದು ಟೀಕಿಸಿದ್ದಾರೆ.