Advertisement

ರಾಮ ಚಿತ್ರ ಕಥಾ : ಅಯೋಧ್ಯೆಯ ಭಾವೈಕ್ಯ ನೋಡ ಬನ್ನಿ…

03:27 PM Sep 29, 2018 | Team Udayavani |

ಅಯೋಧ್ಯೆಗೆ ಶ್ರೀರಾಮನ ಜನ್ಮಭೂಮಿ ಎಂಬ ಪ್ರತೀತಿ ಇದೆ. ಅಲ್ಲಿ ರಾಮನಿದ್ದ ಎನ್ನಲು ಸಾಕಷ್ಟು ಪುರಾವೆಗಳೂ ಇತಿಹಾಸಜ್ಞರಿಗೆ ಸಿಕ್ಕಿವೆ ಕೂಡ. ತದನಂತರದಲ್ಲಿ ಆ ನೆಲ ಎರಡೂ ಕೋಮಿನವರ ಕಾದಾಟಕ್ಕೆ ಸಾಕ್ಷಿ ಆಯಿತು. ಆದರೆ, ಅಗ್ನಿಕುಂಡವೆಂದು ಬಿಂಬಿಸಲ್ಪಟ್ಟಿರುವ ಅಯೋಧ್ಯೆಯಲ್ಲಿ ಕೋಮು ಸೌಹಾರ್ದದ ಚಿಲುಮೆ ತಣ್ಣನೆ ಹರಿಯುತ್ತಿದೆ. ಹಿಂದೂ-ಮುಸ್ಲಿಮರು ಅಲ್ಲಿ ಸಹಬಾಳ್ವೆಯಿಂದಲೇ ಜೀವಿಸುತ್ತಿದ್ದಾರೆ. ನಾವ್ಯಾರೂ ಕಂಡಿರದ, ಕೇಳಿರದ ರಾಮರಾಜ್ಯದ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿಯುವ ಛಾಯಾಚಿತ್ರ ಪ್ರದರ್ಶನವೊಂದು ಆಯೋಜನೆಯಾಗಿದೆ. ಛಾಯಾಗ್ರಾಹಕ ಸುಧೀರ್‌ ಶೆಟ್ಟಿಯವರ ಕ್ಯಾಮೆರಾದಲ್ಲಿ, ಅಭಿವೃದ್ಧಿಗಾಗಿ ಪರಿತಪಿಸುತ್ತಿರುವ ಅಯೋಧ್ಯೆಯ ನೈಜ ಚಿತ್ರಣ ಸೆರೆಯಾಗಿದೆ.

Advertisement

ಮತ್ತೆ ಮತ್ತೆ ಅಯೋಧ್ಯೆ
ದೆಹಲಿಯಲ್ಲಿ ಫೋಟೊ ಜರ್ನಲಿಸ್ಟ್‌ ಆಗಿದ್ದ ಸುಧೀರ್‌ ಶೆಟ್ಟಿ, 1992ಕ್ಕಿಂತ ಮೊದಲಿನಿಂದಲೂ ಅಯೋಧ್ಯೆಗೆ ಪರಿಚಿತರು. ಬಹಳಷ್ಟು ಬಾರಿ ಅಲ್ಲಿಗೆ ಭೇಟಿ ಅಲ್ಲಿನ ಜನಜೀವನವನ್ನು ಅರ್ಥೈಸಿಕೊಂಡಿದ್ದಾರೆ. ಅಯೋಧ್ಯೆಯ ಹೆಸರಿನಲ್ಲಿ ದೇಶದ ಬೇರೆ ಕಡೆ ನಡೆಯುವ ಕೋಮು ಗಲಭೆಗಳನ್ನು ನೋಡಿದ್ದಾರೆ. ಅಯೋಧ್ಯೆಯಲ್ಲಿ ತಾವು ಕಂಡಿರುವ ಕೋಮು ಸೌಹಾರ್ದವನ್ನು ಜಗತ್ತಿಗೆ ತಿಳಿಸುವ ಕಳಕಳಿಯೇ ಈ ಛಾಯಾಚಿತ್ರ ಪ್ರದರ್ಶನ. ಕಳೆದ ಒಂದು ವರ್ಷದಲ್ಲಿ ಮತ್ತೆ ಮೂರು ಬಾರಿ ಅಯೋಧ್ಯೆಗೆ ಹೋಗಿ, ಅಲ್ಲಿ ಸೆರೆ ಹಿಡಿದ ಫೋಟೋಗಳು ಮತ್ತು ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಮಾತಾಡಿದ ವಿಡಿಯೋಗಳನ್ನು ಈಗ ಜನರ ಮುಂದೆ ಪ್ರದರ್ಶನಕ್ಕಿಟ್ಟಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಸಂತೋಷ್‌ ಹೆಗಡೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಲೇಖಕ ಪ್ರೊ. ಜಿ.ಕೆ. ಗೋವಿಂದ ರಾವ್‌ ಉಪಸ್ಥಿತರಿರುವರು. ಬೆಂಗಳೂರು ಜನಜಾಗೃತಿ ಸಾಂಸ್ಕೃತಿಕ ಹಾಗೂ ಕಲಾವೇದಿಕೆಯಿಂದ ಈ ಪ್ರದರ್ಶನ ನಡೆಯುತ್ತಿದೆ. 

ಅಯೋಧ್ಯೆಯ ಹೆಸರಿನಲ್ಲಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಆದರೆ, ನೀವೊಮ್ಮೆ ಅಯೋಧ್ಯೆಗೆ ಭೇಟಿ ಕೊಟ್ಟರೆ ಅಲ್ಲಿರುವ ಸೌಹಾರ್ದದ ಅರಿವಾಗುತ್ತದೆ. ಅಲ್ಲಿ ದೇವಸ್ಥಾನದ ಮುಖಂಡರು ಮಸೀದಿ ಕಟ್ಟಲು ನೆರವಾಗಿದ್ದಾರೆ. ಹಬ್ಬದ ದಿನ ಶ್ರೀರಾಮನಿಗೆ ತೊಡಿಸುವ ಬಟ್ಟೆಯನ್ನು ಹೊಲೆಯುವವರು ಮುಸ್ಲಿಮರು. ಅವರಿಗೆ ಬೇಕಾಗಿರುವುದು ಒಳ್ಳೆಯ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶ ಮಾತ್ರ. ವಿಶ್ವ ಪರಂಪರೆಯ ಮುಖ್ಯ ತಾಣವಾಗಬಲ್ಲ ಅಯೋಧ್ಯೆ, ಪ್ರವಾಸೋದ್ಯಮದಲ್ಲೂ ಮುಂದುವರಿದಿಲ್ಲ. ಈ ವಾಸ್ತವಾಂಶಗಳನ್ನು ಯಾರೂ ತೋರಿಸುವುದಿಲ್ಲ. ನನ್ನ ಫೋಟೊಗಳು ಈ ಕಥೆ ಹೇಳುತ್ತಿವೆ.


– ಸುಧೀರ್‌ ಶೆಟ್ಟಿ, ಛಾಯಾಗ್ರಾಹಕ

ಎಲ್ಲಿ?: ಛಾಯಾ ಗ್ಯಾಲರಿ, ರಂಗೋಲಿ ಕೇಂದ್ರ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ
ಯಾವಾಗ?: ಸೆ.30, ಭಾನುವಾರ ಬೆಳಗ್ಗೆ 11 
ಹೆಚ್ಚಿನ ಮಾಹಿತಿಗೆ: 9141778909/9980462471

Advertisement

Udayavani is now on Telegram. Click here to join our channel and stay updated with the latest news.

Next