ಬೆಳ್ತಂಗಡಿ: ಯುವಕರಿಗೆ ಜಗತ್ತನ್ನು ಪರಿವರ್ತನೆ ಮಾಡುವ ಶಕ್ತಿಯಿದೆ. ಶಾಸಕ ಹರೀಶ್ ಪೂಂಜ ಜಾತಿ ಧರ್ಮ ರಹಿತವಾಗಿ ರಾಷ್ಟ್ರೀಯ ಚಿಂತನೆ ಯಡಿ ಬಿಜೆಪಿಯನ್ನು ಬೆಳ್ತಂಗಡಿಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಥವಾ ರಾಹುಲ್ ಗಾಂಧಿಯೇ ಬಂದು ಇಲ್ಲಿ ಸ್ಪರ್ಧಿಸಿದರೂ ರಾಜ್ಯದಲ್ಲೇ ದಾಖಲೆಯ ಲಕ್ಷಕ್ಕೂ ಅಧಿಕ ಮತ ಅಂತರ ದಿಂದ ಹರೀಶ್ ಪೂಂಜ ಗೆಲುವು ನಿಶ್ಚಿತ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದರು.
ಬೆಳ್ತಂಗಡಿ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ವಿಜಯಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ಬೆಳ್ತಂಗಡಿಯಿಂದ ಉಜಿರೆವರೆಗೆ ಕಾರ್ಯಕರ್ತರು ಹಮ್ಮಿಕೊಂಡ ವಿಜಯೋತ್ಸವ ಬೈಕ್ ರ್ಯಾಲಿ, ಬಳಿಕ ಉಜಿರೆ ಶಾರದಾ ಮಂಟಪದಲ್ಲಿ ನಡೆದ ವಿಕಾಸ ಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಹಿರಿಯ ಮುಖಂಡ ಕುಶಾಲಪ್ಪ ಗೌಡ ಮಾತನಾಡಿ, ಹತ್ತಾರು ವರ್ಷಗಳ ಹಿಂದೆ ಪಕ್ಷ ಕಟ್ಟುವ ವೇಳೆ ಗ್ರಾಮೀಣ ಭಾಗ ಸುತ್ತುವಾಗ ಅಭಿವೃದ್ಧಿ ಯಾವಾಗ ಎಂಬ ಚಿಂತೆಯಿತ್ತು. ಆದರೆ ಅಭಿವೃದ್ಧಿ ಚಿಂತನೆಯಡಿ ರಾಜ್ಯದ ಇತರ ವಿಧಾನ ಸಭಾ ಕ್ಷೇತ್ರಕ್ಕೆ ಮಾದರಿಯಾಗಬಲ್ಲಂತೆ ಶಾಸಕರು ನಡೆದು ತೋರಿಸಿದ್ದಾರೆ ಎಂದರು. ಹರೀಶ್ ಪೂಂಜ ಮಾತನಾಡಿ, ರಾಜ್ಯದ 32 ಸಚಿವರು ಯಾವುದಾದರು ಒಂದು ವಿಧಾಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಭೇಟಿ ನೀಡಿದ್ದರೆ ಅದು ಬೆಳ್ತಂಗಡಿ ಕ್ಷೇತ್ರ ಎಂಬ ತೃಪ್ತಿಯಿದೆ.ನವ ಬೆಳ್ತಂಗಡಿಗೆ ಬೇಕಾದ ಎಲ್ಲ ಯೋಜನೆಗಳನ್ನು ತರಲಾಗಿದೆ. 45 ಕಿಂಡಿ ಅಣೆಕಟ್ಟು, ಪ್ರವಾಸಿ ಮಂದಿರ, ಶಾಸಕರ ಮಾದರಿ ಶಾಲೆಗೆ ಅನುದಾನ, ರಸ್ತೆಗಳ ಪರಿವರ್ತನೆಯಿಂದ ಕ್ಷೇತ್ರದ ಜನ ಸಂತೋಷದಲ್ಲಿದ್ದಾರೆ. ನಾಲ್ಕು ವರ್ಷಗಳಲ್ಲಿ ಅವಿರತ ಸೇವೆಗೆ ಸಹಕಾರ ನೀಡಿದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಜನಮಾನಸಕ್ಕೆ ತಲುಪಿಸುವ ಕೆಲಸವಾಗಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತಾ ವಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯ ದರ್ಶಿಗಳಾದ ಗಣೇಶ್ ನಾವೂರು, ಶ್ರೀನಿವಾಸ್ ರಾವ್, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಚೆನ್ನಕೇಶವ ಅರಸಮಜಲು ಉಪಸ್ಥಿತರಿದ್ದರು.
ವಸಂತ ಬಂಗೇರರ ಋಣ ಇದೆ
ಇಂದು ಕಾಂಗ್ರೆಸ್‌ನಲ್ಲಿ ಪ್ರತಿಭಟನೆಗೆ ಜನ ಸೇರುತ್ತಿಲ್ಲ. ಅದಕ್ಕಾಗಿ ಕಮ್ಯುನಿಷ್ಟ್ ಪಕ್ಷದಡಿ ಪ್ರತಿಭಟನೆಗೆ ಇಳಿಯುವ ಸ್ಥಿತಿ ಬಂದಿದೆ. ಮಾಜಿ ಶಾಸಕ ಕೆ.ವಸಂತ ಬಂಗೇರರು ಸಿಕ್ಕಸಿಕ್ಕಲ್ಲಿ ನಿಮ್ಮ ಬಗ್ಗೆ ಮಾತಾಡುತ್ತಾರೆ. ನೀವು ಯಾಕೆ ಉತ್ತರ ಕೊಡುತ್ತಿಲ್ಲ ಎಂಬ ಪ್ರಶ್ನೆ ನನಗೆ ಬರುತ್ತದೆ. ಅದಕ್ಕೆ ಕಾರಣ ನಾನು ಈ ಕ್ಷೇತ್ರದ ಶಾಸಕನಾಗುವಲ್ಲಿ ಒಂದು ಪಾಲು ಬಂಗೇರರ ಋಣವಿದೆ. ಒಂದು ಕಾಲದಲ್ಲಿ ಬೆಳ್ತಂಗಡಿಯಲ್ಲಿ ಕಮಲ ಚಿಹ್ನೆಯನ್ನು ಅರಳಿಸಿ ಬಿಜೆಪಿಗಾಗಿ ಶ್ರಮಿಸಿದವರು. ಹಾಗಾಗಿ ನಮ್ಮ ಇಬ್ಬರ ಸೇವೆಯೂ ಈ ಬೆಳ್ತಂಗಡಿ ಜನತೆಗಾಗಿ ಅಗಿದ್ದರಿಂದ ಅವರ ಶ್ರಮವನ್ನು ಗೌರವಿಸಿ, ಎಷ್ಟೇ ಟೀಕೆ ಮಾಡಿದರು ಪರವಾಗಿಲ್ಲ ಅದನ್ನು ಸ್ವೀಕರಿಸುತ್ತೇನೆ ಎಂದು ಶಾಸಕರು ಪ್ರತಿಕ್ರಿಯಿಸಿದರು.
1,500 ಕೋ.ರೂ. ಅಧಿಕ ಅನುದಾನ
ಬೆಳ್ತಂಗಡಿ ತಾಲೂಕಿಗೆ 1,500 ಕೋ.ರೂ. ಅಧಿಕ ಅನುದಾನ ತಂದು ನವ ಬೆಳ್ತಂಗಡಿ ಸೃಷ್ಟಿಸುವುದು ಸಾಮಾನ್ಯವಲ್ಲ. ಎಲ್ಲ ಸಚಿವರನ್ನು ಕರೆಸಿ ಬೆಳ್ತಂಗಡಿಯ ಪ್ರಗತಿಗೆ ಶಾಸಕ ಹರೀಶ್ ಪೂಂಜ ಕಾರಣರಾಗಿದ್ದಾರೆ. ಅವರು ಹೊಸ ದೃಷ್ಟಿಕೋನವನ್ನು ಸೃಷ್ಟಿಸಬಲ್ಲ ರಾಜನೀತಿಜ್ಞ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.