ಪಡುಬಿದ್ರಿ: ರಕ್ತದಾನ ಶ್ರೇಷ್ಠದಾನಗಳಲ್ಲಿ ಒಂದಾಗಿದ್ದು ಯಾವುದೇ ಜಾತಿ ಮತಗಳ ಅಡ್ಡಿ ಈ ದಾನಕ್ಕಿರುವುದಿಲ್ಲ. ರಕ್ತ ಯಾವುದೇ ಅನ್ಯ ವಿಧಾನಗಳಿಂದ ಸೃಷ್ಟಿಮಾಡಲಾಗದ ಮಾನವನಿಂದ ಮಾನವನಿಗೇ ವರ್ಗಾಯಿಸಬೇಕಾದ ಅಮೂಲ್ಯ ಕೊಡುಗೆಯಾಗಿದ್ದು ಪಡುಬಿದ್ರಿ ಕಂಚಿನಡ್ಕದ ಮುಸ್ಲಿಂ ಯುವ ಬಾಂಧವರ ರಕ್ತದಾನ ಶಿಬಿರವು ಯಶಸ್ವಿಯಾಗಲಿ ಎಂದು ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ಹೇಳಿದ್ದಾರೆ.
ಅವರು ಮಾ. 26ರಂದು ಪಡುಬಿದ್ರಿ ಕಂಚಿನಡ್ಕ ಮಾ. ಹಿ. ಪ್ರಾ. ಶಾಲೆಯಲ್ಲಿ ಪಡುಬಿದ್ರಿ ವಲಯದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಶ್ರಯದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿಯ ಎಸ್‌ಡಿಪಿಐ ಅಧ್ಯಕ್ಷ ಮೊಹಮ್ಮದ್ ಶರೀಫ್ ವಹಿಸಿದ್ದರು. ಕಾಪು ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷ ಹನೀಫ್ ಮೂಳೂರು ಮಾತಾಡಿದರು.
ವೇದಿಕೆಯಲ್ಲಿ ಕೆಎಂಸಿ ಮಂಗಳೂರಿನ ಬ್ಲಿಡ್ ಬ್ಯಾಂಕ್‌ನ ಡಾ | ನಿಶಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಜೊತೆ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಚ್ಚಿಲ, ತೌಫೀಕ್ ಉಚ್ಚಿಲ, ಪಡುಬಿದ್ರಿ ಗ್ರಾ. ಪಂ. ಸದಸ್ಯ ಹಸನ್ ಬಾವ, ಕಂಚಿನಡ್ಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯೋಗೀಶ್, ಜೈ ಕರ್ನಾಟಕ ಪಡುಬಿದ್ರಿ ಘಟಕಾಧ್ಯಕ್ಷ ಸಿ. ಪಿ. ಅಬ್ದುಲ್ ರಹಿಮಾನ್, ಅರಫಾ ಬಾಯ್ಸ ಕಂಚಿನಡ್ಕ ಸಂಸ್ಥೆಯ ಅಧ್ಯಕ್ಷ ಆಸೀರ್, ಯೂಸುಫ್ ಕಂಚಿನಡ್ಕ, ಅಬ್ದುಲ್ ರಹ್ಮಾನ್ ಕಂಚಿನಡ್ಕ, ಕರ್ನಾಟಕ ರಕ್ಷಣಾ ವೇದಿಕೆಯ ಪಡುಬಿದ್ರಿ ಘಟಕಾಧ್ಯಕ್ಷ ನಿಜಾಮುದ್ದೀನ್ ಮತ್ತಿತರರು ಉಪಸ್ಥಿತರಿದ್ದರು. ಉರ್ದು ಏಯಿಡೆಡ್ ಶಾಲೆ ಪಡುಬಿದ್ರಿಯ ಸಂಚಾಲಕ ಶಬ್ಬೀರ್ ಹುಸೇನ್, ಸಾಮಾಜಿಕ ಕಾರ್ಯಕರ್ತ ಮುನೀರ್ ಕಲ್ಮಾಡಿ, ಮಂಗಳೂರಿನ ಕ್ರಿಯೇಟಿವ್ ಫೌಂಡೇಶನ್‌ನ ಇಲ್ಯಾಸ್ ಬಜಪೆಯವರನ್ನು ಇದೇ ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಮೊಹಿದ್ದಿನ್ ರಿಶಿಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಈ ಶಿಬಿರದಲ್ಲಿ ಸುಮಾರು 50ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.