ರಕ್ಷಿತ್ ಶೆಟ್ಟಿ “ಪರಂವಾ ಸ್ಟುಡಿಯೋ’ ಆರಂಭಿಸಿ ಆ ಮೂಲಕ “ಕಿರಿಕ್ ಪಾರ್ಟಿ’ ಸಿನಿಮಾ ಮಾಡಿದ್ದು ನಿಮಗೆ ಗೊತ್ತೇ ಇದೆ. ಆ ಸಿನಿಮಾ ಹಿಟ್ ಆದ ನಂತರ ರಕ್ಷಿತ್ “ಪರಂವಾ ಸ್ಟುಡಿಯೋ’ ಮೂಲಕ ಮತ್ತಷ್ಟು ಸಿನಿಮಾ ನಿರ್ಮಿಸುತ್ತಿದ್ದಾರೆ. ಆದರೆ, ಈ ಸಿನಿಮಾಗಳಿಗೆ ಇತರ ಬ್ಯಾನರ್‌ಗಳು ಕೂಡಾ ಸಾಥ್ ನೀಡುತ್ತಿವೆ. ಈಗ ಸೋಲೋ ಆಗಿ “ಪರಂವಾ ಸ್ಟುಡಿಯೋ’ ಮೂಲಕ ಮತ್ತೂಂದು ಸಿನಿಮಾ ನಿರ್ಮಿಸಲು ಸಜ್ಜಾಗಿದ್ದಾರೆ. ಅದು “777 ಚಾರ್ಲಿ’.
ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ರಾಜ್‌ಗೆ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ಹೌದು, ಕಿರಣ್ ರಾಜ್ ಎನ್ನುವವರು “777 ಚಾರ್ಲಿ’ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡುತ್ತಿದ್ದಾರೆ ಕಿರಣ್ ರಾಜ್. ಅಷ್ಟಕ್ಕೂ ಈ ಚಿತ್ರದಲ್ಲಿ ಕಿರಣ್ ರಾಜ್ ಏನು ಹೇಳಲು ಹೊರಟಿದ್ದಾರೆಂದರೆ ಪ್ರಾಣಿ ಹಾಗೂ ಮನುಷ್ಯ ಸಂಬಂಧವನ್ನು ಎಂಬ ಉತ್ತರ ಅವರಿಂದ ಬರುತ್ತಾರೆ.
ಇಡೀ ಚಿತ್ರ ಒಂದು ನಾಯಿ ಹಾಗೂ ಹೀರೋ ಸುತ್ತ ಸುತ್ತುತ್ತದೆಯಂತೆ. “ಇದು ಮನುಷ್ಯ ಹಾಗೂ ಪ್ರಾಣಿಯ ಬಾಂಧವ್ಯದ ಸುತ್ತ ನಡೆಯುವ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಡಿಪ್ರಸ್ ಆಗಿ ಶಾರ್ಟ್‌ಟೆಂಪರ್ ಆಗಿರುವ ನಾಯಕ ನಟ ಏಕಾಂಗಿಯಾಗಿರುತ್ತಾನೆ. ಕಂಪೆನಿಯಲ್ಲೂ ಯಾರೊಂದಿಗೆ ಬೆರೆಯದೇ ಸಿಂಗಲ್ ಆಗಿ ಇರುವ ನಾಯಕನಿಗೆ ಬೀದಿ ನಾಯಿಯೊಂದು ಎಂಟ್ರಿಕೊಡುತ್ತದೆ. ತುಂಬಾ ಆ್ಯಕ್ಟೀವ್ ಆಗಿರುವ ಆ ನಾಯಿ ಆತನ ಲೈಫ್ಗೆ ಎಂಟ್ರಿಕೊಟ್ಟ ತಕ್ಷಣ ಆತ ಸಂಪೂರ್ಣ ಬದಲಾಗುತ್ತಾನೆ.
ಆ ಬದಲಾವಣೆಗೆ ಕಾರಣ ಏನು, ಆ ಪ್ರಕ್ರಿಯೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ಕಿರಣ್ ರಾಜು. ಕಿರಣ್ ರಾಜ್ ಈ ಹಿಂದೆ ಇಮ್ರಾನ್ ಸರ್ದಾರಿಯಾ, ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಚಿತ್ರದಲ್ಲಿ ಅರವಿಂದ್ ಅಯ್ಯರ್ ನಾಯಕರಾಗಿ ನಟಿಸುತ್ತಿದ್ದಾರೆ. ಸದ್ಯ “ಭೀಮಸೇನ ನಳಮಹಾರಾಜ’ದಲ್ಲಿ ನಟಿಸುತ್ತಿರುವ ಅರವಿಂದ್‌ಗೆ ನಾಯಕರಾಗಿ ಇದು ಎರಡನೇ ಸಿನಿಮಾ.
ಮೊದಲೇ ಹೇಳಿದಂತೆ ಚಿತ್ರದಲ್ಲಿ ಲ್ಯಾಬ್ರಡಾರ್ ಜಾತಿಯ ನಾಯಿ ಕೂಡಾ ಪ್ರಮುಖ ಪಾತ್ರ ಮಾಡುತ್ತಿದೆ. ಆ ನಾಯಿಗೆ ಊಟಿಯಲ್ಲಿ ತರಬೇತಿ ಕೊಡಿಸಲಾಗುತ್ತಿದೆ. ನಾಯಕ ಇದ್ದ ಹಾಗೂ ಇಲ್ಲದ ಸನ್ನಿವೇಶದಲ್ಲಿ ಹೇಗೆ ನಟಿಸಬೇಕೆಂದು ತರಬೇತಿ ನೀಡಲಾಗುತ್ತದೆಯಂತೆ. ಚಿತ್ರಕ್ಕೆ ನಾಬಿನ್ ಪೋಲ್ ಸಂಗೀತ, ಅರುಣ್ ಕಶ್ಯಪ್ ಛಾಯಾಗ್ರಹಣವಿದೆ. ಜನವರಿಯಿಂದ ಚಿತ್ರೀಕರಣ ಶುರುವಾಗಲಿದೆ.