Advertisement
ರಕ್ಷಾ ಬಂಧನ ಎಂಬುದರಲ್ಲಿ ರಕ್ಷೆ ಅಂದರೆ ರಕ್ಷಣೆ ಹಾಗೂ ಬಂಧನ ಅಂದರೆ ಸಂಬಂಧ ಎಂಬರ್ಥವನ್ನು ನೀಡುತ್ತದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ! ಈ ಹಬ್ಬವು ಒಂದೊಳ್ಳೆಯ ಬಾಂಧವ್ಯ ಬೆಳೆಯಲು ಸಹಕಾರಿ. ರಕ್ಷೆಯನ್ನು ಕಟ್ಟಿಸಿಕೊಳ್ಳುವುದರ ಮೂಲಕ ಸಹೋದರನು ತನ್ನ ಸಹೋದರಿಯನ್ನು ಚಂದದಿಂದ ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಸಹೋದರಿ ತಾನು ರಕ್ಷೆ ಕಟ್ಟಿದ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ, ಉನ್ನತಿಗಾಗಿ ಪ್ರಾರ್ಥಿಸುತ್ತಾಳೆ. ಸಹೋದರ- ಸಹೋದರಿಯ ಬಂಧದ ತೀವ್ರತೆಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವಲ್ಲಿ ರಕ್ಷಾಬಂಧನ ಮಹತ್ವವನ್ನು ಪಡೆದಿದೆ.
Related Articles
Advertisement
ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು, ತನ್ನ ಪತಿಯನ್ನು ಕೊಲ್ಲಬಾರದು ಎಂಬ ಮನವಿಯ ಜೊತೆಗೆ ಅಲೆಕ್ಸಾಂಡರನಿಗೆ ಕಳುಹಿಸಿದಳು. ಯುದ್ಧದಲ್ಲಿ ಪೋರಸ್ ಗೆದ್ದನಾದರೂ, ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಅರ್ಥಾತ್ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು!
ಹಾಗೆಯೇ, ಭಾರತದ ಪ್ರಮುಖ ಶಾಖೆಯಾದ ರಾಷ್ಟ್ರೀಯ ಸ್ವಯಂಸೇವಕಾ ಸಂಘದ ಸ್ವಯಂಸೇವಕರು ಪರಸ್ಪರರ ಮಣಿಕಟ್ಟಿಗೆ ರಾಖಿಗಳನ್ನು ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸುತ್ತಾರೆ. ಅವರ ಪಾಲಿಗೆ ರಕ್ಷೆಯು ಯಾವುದೇ ಸಂದರ್ಭ ಬಂದರೂ ಒಬ್ಬರನ್ನೊಬ್ಬರು ರಕ್ಷಿಸಲು ಮತ್ತು ಪರಸ್ಪರ ಜೊತೆ ನಿಲ್ಲುವ ಬದ್ಧತೆಯ ಶಕ್ತಿ. ಇದು ಸ್ವಯಂಸೇವಕರಲ್ಲಿ ಸಹೋದರತ್ವದ ಭಾವನೆಯನ್ನು ಬಲಪಡಿಸಿ ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಸಹಕರಿಸಲು ಸಹಾಯ ಮಾಡುತ್ತದೆ.
ರಕ್ಷಾ ಬಂಧನದ ಮುಖೇನವಾಗಿ ರಕ್ಷೆಯ ಸಂಕೇತವಾಗಿರುವ ಸ್ನೇಹ-ಸಹಕಾರ-ಸ್ವಾಭಿಮಾನ-ಏಕತೆಯನ್ನು ಅಂತರಂಗದೊಳಗಿನಿಂದಲೇ ಬೆಳೆಸಿ, ಅದನ್ನು ಸಹೋದರಿಯಂತಿರುವ ತಾಯಿ ಭಾರತಿಗಾಗಿ, ತಾಯ್ನಾಡು ಭಾರತಕ್ಕಾಗಿ ಮುಡಿಪಾಗಿವುದು ರಕ್ಷೆಯನ್ನು ಕಟ್ಟುವವರ, ಕಟ್ಟಿಸಿಕೊಳ್ಳುವವರ ಕರ್ತವ್ಯವಾಗಿದೆ!
ಪಂಚಮಿ ಬಾಕಿಲಪದವು
ತೃತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ
ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ, ಪುತ್ತೂರು