Advertisement

ಕೋವಿಡ್ ಭೀತಿ ನಡುವೆ ರಕ್ಷಾ ಬಂಧನದ ಸಂಭ್ರಮ

01:02 PM Aug 04, 2020 | Suhan S |

ಗದಗ: ನೂಲ ಹುಣ್ಣಿಮೆ ನಿಮಿತ್ತ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ಸಹೋದರ-ಸಹೋದರಿಯರ ಮಧುರ ಬಾಂಧವ್ಯ ಬೆಸೆಯುವ ರಾಖೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

Advertisement

ಮಹಿಳೆಯರು., ಯುವತಿಯರು, ಹೆಣ್ಣು ಮಕ್ಕಳು ಬೆಳಗ್ಗೆಯೇ ದೇವಸ್ಥಾನ, ಮಠಗಳಿಗೆ ತೆರಳಿ ಒಡಹುಟ್ಟಿದವರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಬಳಿಕ ಮನೆಯಲ್ಲಿ ಸಹೋದರರಿಗೆ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ರಾಖೀ ಕಟ್ಟಿ, ಸಿಹಿ ತಿನ್ನಿಸಿದರು. ಹಿರಿಯ ಸಹೋದರರಿಂದ ಆಶೀರ್ವಾದ ಪಡೆದು, ಕಿರಿಯರನ್ನು ಹರಸಿ ಕಾಣಿಕೆ ಸ್ವೀಕರಿಸಿದರು. ನೆರೆಹೊರೆಯ, ಬಂಧು-ಬಾಂಧವರ ಮನೆಗೆ ಹೋಗಿ ಆತ್ಮೀಯರಿಗೆ ರಾಖೀ ಕಟ್ಟಿ, ಸಹೋದರರ ಶ್ರೀರಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಅಂಚೆ ಮೂಲಕ ರಾಖೀ ರವಾನೆ: ಸಂಜೆಯವರೆಗೂ ಯುವತಿಯರು ಸೇರಿದಂತೆ ಮಕ್ಕಳು ರಾಖೀ ಖರೀದಿಸಿದರು. ಇನ್ನೂ ಕೆಲವರು ತಮ್ಮ ದೂರದ ಸಹೋದರರಿಗೆ ಅಂಚೆ ಮೂಲಕ ರಾಖೀ ಕಳಿಸುತ್ತಿದ್ದ ಸನ್ನಿವೇಶ ಕಂಡು ಬಂತು. ಬಸವೇಶ್ವರ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ಪ್ರತಿ ವರ್ಷ ಅವಳಿ ನಗರ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಿಂತು, ಜನರಿಗೆ ರಾಖೀ ಕಟ್ಟುವ ಮೂಲಕ ಶುಭ ಕೋರುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಸೋಂಕಿನ ಭೀತಿ ಆವರಿಸಿದ್ದರಿಂದ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕನವರು, ಆಶ್ರಮದ ಸದ್ಭಕ್ತರಿಗೆ ಹಾಗೂ ಅನುಯಾಯಿಗಳು ಸೇರಿದಂತೆ 400ಕ್ಕೂ ಹೆಚ್ಚು ಜನರಿಗೆ ಅಂಚೆ ಮೂಲಕ ರಾಖೀ ತಲುಪಿಸಿದ್ದು ವಿಶೇಷ. ಇನ್ನುಳಿದಂತೆ ಇಲ್ಲಿನ ಜಿಲ್ಲಾಡಳಿತ ಭವನ ಹಾಗೂ ವಿವಿಧೆಡೆ ಇರುವ ಸರಕಾರಿ ಕಚೇರಿಗಳ ಸಿಬ್ಬಂದಿಗೆ ಪ್ಯಾಕಿಂಗ್‌ನಲ್ಲಿರುವ ರಾಖೀಗಳನ್ನು ನೀಡಿ, ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next