Advertisement
ಹಾಗಾದರೆ ಈ ಆಚರಣೆ, ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಲು ಸಮರ್ಥಳಿರುವ ಹೆಣ್ಣು ಇನ್ನೊಬ್ಬರ ರಕ್ಷಣೆಯನ್ನು ಕೋರುತ್ತಾಳೆಂದೇ? ಅಲ್ಲವೇ ಅಲ್ಲ. ಸಹೋದರರಿಗೆ ಇದೊಂದು ಬಗೆಯ ಗೌರವ ಸೂಚಿಸುವ ಕ್ರಮ. ತನ್ನೆಲ್ಲ ಜವಾಬ್ದಾರಿಯನ್ನು ತಾನು ಬಯಸಿ/ಬಯಸದೇ ತೆಗೆದುಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸುವ ಅಣ್ಣನಿಗೊಂದು ತಂಗಿಯ ಕಡೆಯಿಂದ ನಮನ ಸಲ್ಲಿಕೆಯಿದು. ರಾಖಿಯ ಬದಲಿಗೆ ಆಕೆ ಆತನಿಂದ ಉಡುಗೊರೆಯನ್ನೂ ಪಡೆಯುತ್ತಾಳೆ.
Related Articles
Advertisement
ದಶಕಗಳ ಹಿಂದೆ ಉತ್ತರ ಭಾರತದಲ್ಲಷ್ಟೇ ಹೆಚ್ಚು ಪ್ರಾಮುಖ್ಯ ಪಡೆದಿದ್ದ ಈ ಹಬ್ಬ ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ಆಚರಿಸಲ್ಪಡುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳು ರಾಖಿ ತಂದು ಸಹಪಾಠಿಗಳ ಕೈಗೆ ಕಟ್ಟುವ ಮೂಲಕ ಪರಸ್ಪರ ಸಹೋದರತೆಯ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಅಣ್ಣ-ತಂಗಿಯರ ಹಬ್ಬ ರಕ್ಷಾಬಂಧನವೆಂದಾದ ಮೇಲೆ ಒಡಹುಟ್ಟಿದ ಸಹೋದರ ಇಲ್ಲದ ಸಹೋದರಿ ಆಚರಿಸುವುದು ಬೇಡವೇ? ಅಥವಾ ಸಹೋದರನೋರ್ವನಿಗೂ ತಂಗಿಯಿಲ್ಲದ ಸಂಕಟ ಕಾಡದಿರುವುದೇ? ಆದರೆ ರಕ್ತಸಂಬಂಧಿಯಲ್ಲದಿದ್ದರೂ ಮನಸ್ಸಿನಿಂದ ಕರೆದ, ಹಚ್ಚಿಕೊಂಡ, ಹಾಗೆಯೇ ನಡೆದುಕೊಂಡ ಪ್ರತಿಯೊಬ್ಬರೂ ಅಣ್ಣ- ತಂಗಿಯೇ, ಅವರೂ ಈ ಆಚರಣೆಯಲ್ಲಿ ಪಾಲುದಾರರಾಗಬಹುದು. ಇದೇ ಈ ರಾಖಿ ಹಬ್ಬದ ವಿಶೇಷತೆ.
ರಕ್ಷಾ ಬಂಧನವನ್ನು ವರ್ಷಕೊಮ್ಮೆ ಆಚರಿಸಿ ಅನಂತರ ಮರೆತುಬಿಡುವುದೇ? ಇಲ್ಲ , ಒಮ್ಮೆ ರಾಖಿಯನ್ನು ಅಣ್ಣನ ಕೈಗೆ ಕಟ್ಟಿದಳೆಂದರೆ ಮತ್ತವಳ ಕ್ಷೇಮ ನೋಡುವುದು ಅಣ್ಣನಾದವನ ಜವಾಬ್ದಾರಿ. ಅವಳದನ್ನು ಬಯಸದೆಯೇ ಇರಬಹುದು. ಆದರೆ ಸಹೋದರ ನಿರ್ಲಕ್ಷಿಸುವಂತಿಲ್ಲ. ಮನುಷ್ಯ ಬೆಳೆದಂತೆಲ್ಲ ಜತೆಗೆ ಹುಟ್ಟಿದವರನ್ನು ದ್ವೇಷಿಸಿ ದೂರ ತಳ್ಳುವುದಲ್ಲ. ನಮ್ಮ ಸಂಸ್ಕೃತಿಯಂತೆ ಕೊನೇ ತನಕವೂ ನಮ್ಮವರು ಅನ್ನುವ ಭಾವ ತಳೆದಿರುವುದು, ಹೊರೆಯೆನ್ನದಿರುವುದು, ಹೊರೆಯೆನಿಸದಿರುವುದು ಮುಖ್ಯವಾಗುತ್ತದೆ.
ರಕ್ಷಾಬಂಧನ, ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಆಚರಣೆ. ಹಾಗಾಗಿ ಇದು ಬೇರೆಲ್ಲ ಹಬ್ಬಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ ಮತ್ತು ತನ್ನ ವೈಶಿಷ್ಟ್ಯವನ್ನು ಸಾರುತ್ತದೆ. ಕೆಲಸದ ಸ್ಥಳದಲ್ಲೋ ಅಥವಾ ಇನ್ನೆಲ್ಲೋ ಯಾರಿಂದಲೋ ಸಮಸ್ಯೆೆ ಎದುರಾದಾಗ ನನಗೊಬ್ಬ ಅಣ್ಣನಿರಬೇಕು ಎಂದು ಬಹಳಷ್ಟು ಮಹಿಳೆಯರಿಗೆ ಅನಿಸದಿರುವುದಿಲ್ಲ. ಅದು ಅವರನ್ನು ಸದಾ ಕಾಡದಿರುವುದಿಲ್ಲ. ಹೀಗಿದ್ದಾಗ ಒಡಹುಟ್ಟಿದವರಲ್ಲದೆ ಇನ್ಯಾರೋ ಸಹೋದರ ಪ್ರೀತಿ ತೋರಿದಾಗ, ದುರುದ್ದೇಶವಿಲ್ಲದೆ ಕಾಳಜಿ ವಹಿಸಿದಾಗ ಹೆಣ್ಣು ಕರಗದಿರಳು. ತನಗೆ ಸಿಕ್ಕ ಆಸರೆಗೆ ಸಮಾಧಾನಪಡಬಲ್ಲಳು.
ಕೆಲವು ಕಡೆ ಮನೆಯ ಹಿರಿಯ ಮಹಿಳೆಯೇ ಅಣ್ಣನ ಸ್ಥಾನ ವಹಿಸುವುದುಂಟು, ಮನೆಯವರನ್ನೆಲ್ಲ ಪೊರೆಯುವುದುಂಟು. ಇದನ್ನು ನಾವು ಅವಳ ಸುಗುಣ ಅಥವಾ ನಿಸ್ವಾರ್ಥತೆ ಎನ್ನಬಹುದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ಮನಸ್ಸಿನಿಂದ ನೋಡುವವರೆಲ್ಲರೂ ಸಹೋದರರೇ. ಇಂತಹ ಪರಿಶುದ್ಧ ಪ್ರೀತಿಯೇ, ಆ ಶಕ್ತಿಯೇ ಜಗತ್ತನ್ನು ಕಾಪಾಡುವುದು. ಸಮಸ್ತ ಹೆಣ್ಣುಕುಲಕ್ಕೂ ಅಣ್ಣಂದಿರು ದೊರೆಯಲಿ, ತಂಗಿಗಾಗಿ ಹಂಬಲಿಸುವವರಿಗೆಲ್ಲ ಅವಳು ಸಿಗಲಿ. ಸಹೋದರ-ಸಹೋದರಿಯರೆಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
– ವಿನಯಾ ಕೌಂಜೂರು, ಕುಂದಾಪುರ