Advertisement

Koppal ಜಿಲ್ಲೆಯ ಮೂವರು ಸೇವಕರಿಗೆ ರಾಜ್ಯೋತ್ಸವ ಗರಿಮೆ

06:44 PM Oct 31, 2023 | Team Udayavani |

ಕೊಪ್ಪಳ: ಕೊಪ್ಪಳ ಜಿಲ್ಲೆಯ ಮೂವರಿಗೆ ರಾಜ್ಯ ಸರ್ಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advertisement

ಭೂದಾನಿ ಹುಚ್ಚಮ್ಮ ಚೌದ್ರಿಗೆ ಪ್ರಶಸ್ತಿ ಗರಿಮೆ :
ಕೊಪ್ಪಳ: ತನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಎರಡು ಎಕರೆ ಭೂದಾನ ಮಾಡಿ ಅದೇ ಶಾಲೆಯಲ್ಲಿ ಬಿಸಿಯೂಟ ಕೆಲಸಗಾರಳಾಗಿ ಸೇವೆ ಸಲ್ಲಿಸಿದ ಮಹಾಧಾನಿ ಭೂ ಧಾನಿ ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ನಿವಾಸಿ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಕರ್ನಾಟಕ ಸರ್ಕಾರವು ಈ ಬಾರಿ ಸಮಾಜ ಸೇವಾ ಕ್ಷೇತ್ರದಡಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ತಾನು ಅಕ್ಷರ ಕಲಿಯದಿದ್ದರೂ ಮಕ್ಕಳ ಅಕ್ಷರ ಕಲಿಕೆಗೆ ನೆರಳಾಗಲು ತನ್ನ ಭೂಮಿಯನ್ನೇ ದಾನ ಮಾಡಿ ಮಹಾ ತ್ಯಾಗಮಯಿಯಾಗಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಈ ಮಹಾಮಯಿ ಮಕ್ಕಳು ಇಲ್ಲದೇ ಶಾಲೆಯ ಮಕ್ಕಳೇ ತನ್ನ ಅಕ್ಕರೆಯ ಕಂದಮ್ಮಗಳೆಂದು ಶಾಲೆಗೆ ಭೂ ದಾನ ಮಾಡಿದ್ದಾಳೆ. ಇಂದಿಗೂ ಕೂಲಿನಾಲಿ ಮಾಡಿಯೇ ಜೀವನ ನಡೆಸುತ್ತಿದ್ದಾಳೆ. ಇಡೀ ಊರಿನ ಜನರೇ ಇವರಿಗೆ ಆಸರೆಯಾಗಿ ನಿಂತಿದೆ.

ಕೇಶಪ್ಪ ಶಿಳ್ಳಿಕ್ಯಾತರ್‌ಗೆ ಪ್ರಶಸ್ತಿ ಗರಿಮೆ
ಕೊಪ್ಪಳ: ತೊಗಲು ಗೊಂಬೆಯಾಟದಲ್ಲಿ ನಾಡಿನ ತುಂಬೆಲ್ಲಾ ಹೆಸರು ಮಾಡಿ ಸಾಗರದಾಚೆಗೂ ಸಾಗಿ ವಿದೇಶಗಳಲ್ಲಿಯೂ ತಮ್ಮ ಕಲೆಯ ಕಂಪು ಬೀಸಿದ ಕೊಪ್ಪಳ ತಾಲೂಕಿನ ಮೋರನಹಳ್ಳಿಯ ನಿವಾಸಿ ಕೇಶಪ್ಪ ಶಿಳ್ಳಿಕ್ಯಾತರ್ ಅವರಿಗೆ ರಾಜ್ಯ ಸರ್ಕಾರವು ಯಕ್ಷಗಾನ, ಬಯಲಾಟ ಕಲಾ ಕ್ಷೇತ್ರದಡಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರು ಅಕ್ಷರ ಕಲಿಯದಿದ್ದರೂ ಕಲೆಯಲ್ಲಿ ಪರಿಣಿತರಾಗಿ ನಾಡಿನ ಹೆಸರಾಂತ ಉತ್ಸವಗಳಲ್ಲಿ ತಮ್ಮ ತೊಗಲು ಗೊಂಬೆಯಾಟ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ. ಕೃಷಿ ಜೊತೆಗೆ ತೊಗಲುಗೊಂಬೆ ಕಲೆಯೂ ಇವರಿಗೆ ಜೀವನದ ಉಸಿರಾಗಿದೆ. ರಾಜ್ಯದ ತುಂಬೆಲ್ಲಾ ೫ ದಶಕಗಳ ಕಾಲ ಕಲೆಯಲ್ಲೇ ಜೀವನ ನಡೆಸಿದ್ದಾರೆ. ತಮ್ಮ ಕುಟುಂಬಸ್ಥರಿಂದಲೇ ಈ ಕಲೆ ಕರಗತ ಮಾಡಿಕೊಂಡು ಇಂದಿಗೂ ಹೆಸರಾಗಿದ್ದಾರೆ. ೨೦೧೪ರಲ್ಲಿ ಇವರ ತಾಯಿ ಭೀಮವ್ವ ಶಿಳ್ಳಿಕ್ಯಾತರ್‌ಗೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

ಹಗಲುವೇಷಧಾರಿ ಗುಂಡಪ್ಪ ವಿಭೂತಿಗೆ ಪ್ರಶಸ್ತಿ
ಕೊಪ್ಪಳ: ಹಗಲು ವೇಷಧಾರಿಯಾಗಿ ರಾಮ, ಲಕ್ಷ್ಮಣ, ಕೃಷ್ಣ, ಸೀತೆ ಹೀಗೆ ನಾನಾ ಪಾತ್ರದಾರಿಗಳಲ್ಲಿ ಬಣ್ಣ ಹಚ್ಚಿ ನೂರಾರು ಊರು ಸುತ್ತಾಟ ನಡೆಸಿ ತಮ್ಮ ಕಲೆಯಲ್ಲೇ ಜೀವನ ಸಾಗಿಸುತ್ತಿರುವ ಕೊಪ್ಪಳ ಜಿಲ್ಲೆಯ ಸಿದ್ದಾಪುರದ ಹಗಲುವೇಷಧಾರಿ ಗುಂಡಪ್ಪ ವಿಭೂತಿ ಅವರಿಗೆ ರಾಜ್ಯ ಸರ್ಕಾರವು ಈಗ ಜಾನಪದ ಕ್ಷೇತ್ರದಡಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ತಮ್ಮ ಪೂರ್ವಜಿಂದ ಬಂದ ಹಗಲು ವೇಷಧಾರಿಯ ನಟನೆ, ದಾಸಪದ, ಭಕ್ತಿ ಗೀತೆಗಳು, ಜಾನಪದ ಗೀತೆ, ಬಸವಣ್ಣನ ವಚನಗಳು ಹೀಗೆ ತಮ್ಮ ಮಾತುಗಳ ಮೂಲಕವೇ ಬಂದ ಈ ಕಲೆಗೆ ಸರ್ಕಾರ ಮನ್ನಣೆ ನೀಡಿ ಪ್ರಶ್ತಿಗೆ ಆಯ್ಕೆ ಮಾಡಿದೆ. ಇಂದು ತಮ್ಮ ಇಡೀ ಕುಟುಂಬಕ್ಕೂ ಈ ಕಲೆಯನ್ನು ಗುಂಡಪ್ಪ ವಿಭೂತಿ ಅವರು ವಿಸ್ತರಿಸಿದ್ದಾರೆ. ಅಕ್ಷರವೇ ಕಲಿಯದ ಈ ಕಲಾ ಸೇವಕನಿಗೆ ಪ್ರಶಸ್ತಿಯ ಗರಿಮೆ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next