Advertisement

ರಾಜ್ಯೋತ್ಸವ ಪ್ರಶಸ್ತಿಗಾಗಿ ಸಮ್ಮಿಶ್ರ ಲಾಬಿ

06:00 AM Oct 26, 2018 | |

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡಲಾಗುತ್ತಿರುವ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ತೀವ್ರ ಲಾಬಿ ಶುರುವಾಗಿದೆ.

Advertisement

ಈ ಬಾರಿ ಒಟ್ಟು 63 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಜಾತಿವಾರು, ಪ್ರದೇಶವಾರು ಲೆಕ್ಕಾಚಾರಗಳು ನಡೆದಿದ್ದು ರಾಜಕೀಯ ಪ್ರಭಾವ ಬಳಸಿ ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಕೂಡ ತೆರೆ ಮರೆಯಲ್ಲಿ ಸಾಗಿದೆ.

ಪ್ರಶಸ್ತಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವವರು ಶಿಫಾರಸು ಪತ್ರಗಳನ್ನು ಹಿಡಿದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ, ಶಾಸಕರ, ಸಂಸದರ ಮತ್ತು ಕೇಂದ್ರ ಸಚಿವರ ನಿವಾಸ, ಕಚೇರಿಗಳನ್ನು ಎಡತಾಕುತ್ತಿದ್ದಾರೆ. ರಾಜ್ಯದ ಕೆಲವೆಡೆ ಲೋಕಸಭೆ ಮತ್ತು ವಿಧಾನ ಸಭೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ಕೈಗೆ ಸಿಗದ ಹಿನ್ನೆಲೆಯಲ್ಲಿ ಮೊಬೈಲ್‌ನಲ್ಲೇ ಸಂಪರ್ಕಿಸಿ ತಮ್ಮ ಶಿಫಾರಸು ನೆನಪಿಸುತ್ತಿದ್ದಾರೆ. ಜತೆಗೆ ಸಚಿವರ, ಶಾಸಕರ ಸಂಬಂಧಿಕರನ್ನು ಭೇಟಿ ಮಾಡಿ, ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.

ತಮ್ಮವರ ಪರ ಬ್ಯಾಟಿಂಗ್‌
ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಅಧಿಕಾರದಲ್ಲಿರುವುರಿಂದ ಪಕ್ಷವಾರು ಪ್ರಭಾವ ಬಳಿಸಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂಬ ಮಾತು ಕೇಳಿಬಂದಿದೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐದು ನೂರುಕ್ಕೂ ಅಧಿಕ ಮಂದಿ ಸಾಧಕರು ಸ್ವಯಂ ಪ್ರೇರಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.  ಈ ನಡುವೆ ಸಚಿವರು, ಶಾಸಕರು ಸೇರಿದಂತೆ ಇನ್ನಿತರ ಸಂಘಟನೆಗಳ ವತಿಯಿಂದಲೇ ಸುಮಾರು ನೂರಾರು ಹೆಚ್ಚು ಶಿಫಾರಸು ಅರ್ಜಿಗಳು ಬಂದಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಲಾಖೆ ನಡೆಗೆ ಅಸಮಾಧಾನ
ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ತಮ್ಮ ವ್ಯಾಪ್ತಿಗೆ ಬರುವ ಅಕಾಡೆಮಿ ಅಧ್ಯಕ್ಷರುಗಳಿಗೆ ಪತ್ರ ಬರೆದು ಸಾಧಕರ ಹೆಸರಿನ ಶಿಫಾರಸು ಪಟ್ಟಿ ನೀಡುವಂತೆ ಸೂಚಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ದೊಡ್ಡ ಪಟ್ಟಿ, ಆಯಾ ಅಕಾಡೆಮಿ ಅಧ್ಯಕ್ಷರ ಬಳಿ ಇವೆ.

Advertisement

ಆದರೆ ಇಲಾಖೆ, ಕೆಲವು ಅಕಾಡೆಮಿ ಅಧ್ಯಕ್ಷರಿಗೆ 5 ಇನ್ನೂ ಕೆಲವು ಅಧ್ಯಕ್ಷರಿಗೆ 7 ಮಂದಿ ಸಾಧಕರ ಹೆಸರುಗಳನ್ನಷ್ಟೇ ಶಿಫಾರಸು ಮಾಡುವಂತೆ ಪತ್ರದಲ್ಲಿ ಸೂಚಿಸಿದೆ. ಹೀಗಾಗಿ, ಇಲಾಖೆಯ ಈ ನಡೆ ಕೆಲವು ಅಕಾಡೆಮಿ ಅಧ್ಯಕ್ಷರ ಅಸಮಾಧಾನಕ್ಕೆ ಕಾರಣವಾಗಿದೆ. ವಿವಿಧ ಕಲಾಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರ ಸಂಖ್ಯೆ ದೊಡ್ಡದಿದೆ. ಆದರೆ, ಬೆರಳೆಣಿಕೆ ಮಂದಿಯನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಿದರೆ ಹೇಗೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಕಾಡೆಮಿ ಅಧ್ಯಕ್ಷರೊಬ್ಬರು ಪ್ರಶ್ನಿಸಿದ್ದಾರೆ.

ಯಕ್ಷಗಾನ ಅಕಾಡೆಮಿ ನಿರ್ಲಕ್ಷ್ಯ!
ಅಚ್ಚcರಿ ಸಂಗತಿ ಅಂದರೆ ರಾಜೋತ್ಸವ ಪ್ರಶಸ್ತಿ ನೀಡುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲಿ ಅಥವಾ ಹಿರಿಯ ಅಧಿಕಾರಿಗಳಾಗಲಿ ಇಲ್ಲಿಯವರೆಗೂ ಯಕ್ಷಗಾನ ಅಕಾಡೆಮಿಯನ್ನು ಸಂಪರ್ಕಿಸಿಲ್ಲ. ಪ್ರಶಸ್ತಿ ನೀಡುವ ಸಂಬಂಧ ಅಕಾಡೆಮಿ ಹಲವು ಅಧ್ಯಕ್ಷರಿಗೆ ಪತ್ರ ಬರೆದು, ಸಾಧಕರ ಹೆಸರನ್ನು ಶಿಫಾರಸು ಮಾಡುವಂತೆ ಇಲಾಖೆ ಕೇಳಿಕೊಂಡಿದೆ.ಆದರೆ ಯಕ್ಷಗಾನ ಅಕಾಡೆಮಿಗೆ ಈ ಬಗ್ಗೆ ಪತ್ರ ಬರೆದಿರುವುದನ್ನೆ ಮರೆತಿದೆ.

ರಾಜ್ಯೋತ್ಸವ ಪ್ರಶಸ್ತಿ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಎಂ.ಎ.ಹೆಗಡೆ   ಬೇರೆ,ಬೇರೆ ಅಕಾಡೆಮಿಗಳ ಅಧ್ಯಕ್ಷರಿಗೆ ಪತ್ರಬರೆದು ಹೆಸರು ಶಿಫಾರಸ್ಸಿಗೆ  ಇಲಾಖೆ ಸೂಚಿಸಿದೆ. ಆದರೆ ತಮ್ಮಗೆ ಆ ರೀತಿಯ ಯಾವುದೇ ಪತ್ರ ಬರೆಯದೆ ಇರುವುದು ಅಚ್ಚರಿ ತಂದಿದೆ. ಇಲಾಖೆ ಈ ಕ್ರಮ ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಈ ತಾರತಮ್ಯ ಧೋರಣೆ ಸರಿಯಲ್ಲ.ಯಕ್ಷಗಾನ ಕಲಾವಿದರು ಕೂಡ ಇತರೆ ಕಲಾವಿದರಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹೆಸರು ಘೋಷಣೆಗೆ ತೊಡರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಹಲವಾರು ರೀತಿಯ ಸಮಸ್ಯೆಗಳು ಅಡ್ಡಿಯಾಗಿವೆ. ಪ್ರಶಸ್ತಿ ನೀಡುವ ಸಂಬಂಧ ಆಯ್ಕೆ ಪ್ರಕ್ರಿಯೆ ಆರಂಭವಾಗಿ, ಅಂತಿಮ ಹಂತ ತಲುಪಬೇಕಾಗಿತ್ತು. ಆದರೂ, ಅದ್ಯಾವುದರ ಸುಳಿವು ಕಾಣಿಸುತ್ತಿಲ್ಲ. ಇದರ ಜತೆಗೆ ಉಪಚುನಾವಣೆ ಕೂಡ ವಿಳಂಬಕ್ಕೆ ಕಾರಣವಾಗಿದೆ.

ಶಿವಮೊಗ್ಗ, ಮಂಡ್ಯ, ರಾಮನಗರ,ಬಳ್ಳಾರಿ, ರಾಯಚೂರಿನಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಇದು ಪ್ರಶಸ್ತಿ ಆಯ್ಕೆ ಘೋಷಣೆಗೆ ಕಗ್ಗಂಟಾಗಿ ಪರಿಣಮಿಸಿದೆ.ಉಪ ಚುನಾವಣೆ ನಡೆಯುತ್ತಿರುವ ಪ್ರದೇಶಗಳಲ್ಲಿ ನೆಲೆಸಿರುವ ಸಾಧಕರಿಂದ ಅರ್ಜಿ ಬಂದಿದ್ದು, ಹೆಸರು ಘೋಷಣೆಗೆ ತೊಡರು ಉಂಟಾಗಿದೆ.

ಪ್ರಶಸ್ತಿಗಳು ಇಂದು ತನ್ನ ಮೌಲ್ಯ ಕಳೆದುಕೊಳ್ಳುತ್ತಿವೆ.ರಾಜಕೀಯ ಲಾಬಿ ಬಳಸಿ ಪ್ರಶಸ್ತಿ ಪಡೆದುಕೊಳ್ಳಲಾಗುತ್ತಿದೆ. ಈ ಪ್ರವೃತ್ತಿ ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸಿದೆ. ನಾನು ಸಚಿವಳಾಗಿದ್ದಾಗ ಸಾಧಕರನ್ನು ಗುರುತಿಸಿ ಗೌರವಿಸಿದ್ದೆ.
– ಲೀಲಾದೇವಿ ಆರ್‌.ಪ್ರಸಾದ್‌, ಮಾಜಿ ಸಚಿವೆ.

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next