ಪ್ರೀತಿ ಭಟ್, ಗುಣವಂತೆ
ಹೆಣ್ಣು ಸ್ವಾಭಿಮಾನಿಯಾಗಿ ದುಡಿಯಲು ಪಟ್ಟು ಹಿಡಿದು ನಿಂತರೆ ಯಾರಿಂದ ತಾನೆ ತಡೆಯಲು ಸಾಧ್ಯ. ಆಗದು ಎಂದು ಎಲ್ಲಿಯವರೆಗೆ ಕುಳಿತುಕೊಳ್ಳುತ್ತೇವೆಯೋ ಅಲ್ಲಿಯವರೆಗೆ ನಮ್ಮಿಂದ ಎನೂ ಮಾಡಲು ಸಾಧ್ಯವಿಲ್ಲ. ಅದೇ, ಮೂರು ಜನ ಏನು ಮಾತನಾಡಿದರೂ ಪರವಾಗಿಲ್ಲ ನಾನು ನನ್ನ ಕೆಲಸ ಮಾಡುತ್ತೇನೆ ಎನ್ನುವವರಿಗೆ ಸೋಲು ಎಂಬುದು ಬರುವುದಕ್ಕೆ ಅವಕಾಶವೇ ಇರುವುದಿಲ್ಲ.
ಇದಕ್ಕೆ ಸ್ಪಷ್ಟ ಉದಾಹರಣೆ ಸುಮಂಗಲಮ್ಮ. ವಸುಂಧರ ಕೃಷಿ ಕ್ಷೇತ್ರದ ಮಾಲಕಿಯಾಗಿರುವ ಇವರು ರೇಷ್ಮೆ ಕೃಷಿ, ತೆಂಗು, ಹುಣಸೆ, ಶ್ರೀಗಂಧ, ಅಜೋಲಾ, ಹಸು ಸಾಕಣೆ, ಮೇಕೆ ಸಾಕಣೆ, ಎರೆಹುಳ ಸಾಕಣೆ, ರೆಷ್ಮೇ ಗೂಡು ಉತ್ಪಾದನೆ, ಬಾಳೆ ಸೇರಿದಂತೆ ಹಲವು ಕೃಷಿಗಳನ್ನು ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮದ ಕೃಷಿಕ ವೀರಭದ್ರಪ್ಪನವರ ಪತ್ನಿ ಸುಮಂಗಲಮ್ಮ ರಾಜ್ಯದಲ್ಲಿಯೇ ಮೊದಲು ಟ್ರ್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳೆ, ಹೆಂಗಸರು ಟ್ರ್ಯಾಕ್ಟರ್ ಓಡಿಸತ್ತಾರಾ? ಅವರಿಗೆ ಅದೆಲ್ಲಾ ಸಾಧ್ಯನಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಡುವವರಿಗೆ ಟ್ರ್ಯಾಕ್ಟರ್ ಓಡಿಸಿ ತೋರಿಸಿದ್ದರು.
ದಂಪತಿಗಳ ಅವಿರತ ಪರಿಶ್ರಮದಿಂದ ಇಂದು ಬರಡಾಗಿದ್ದ ಭೂಮಿ ಹಸುರಾಗಿ ನಳನಳಿಸುತ್ತಿದೆ. ಬಡತನ ಎಂದು ಲೆಕ್ಕಿಸದೆ ಕೃಷಿಯನ್ನೆ ಕುಲಕಸುಭಾಗಿಸಿಕೊಂಡು ಮಕ್ಕಳನ್ನು ಓದಿಸಿ ನೆಮ್ಮದಿ ಜೀವನ ಸಾಗಿಸಿದ ದಿಟ್ಟ ಮಹಿಳೆ ಸುಮಂಗಲಮ್ಮ. ಈಗ ಇವರ ಕೃಷಿ ಭೂಮಿ ಜಿಲ್ಲೆಯ ಮಾಹಿತಿ ಕೇಂದ್ರವಾಗಿ ಅನೇಕ ಕೃಷಿಕರಿಗೆ ಸಹಾಯವಾಗಿದೆ. ಹಿಂದೆ ಊಟಕ್ಕೂ ಕಷ್ಟ ಪಡುತ್ತಿದ್ದ ಸಂಸಾರ ಈಗ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವ 50 ಜನರಿಗೆ ಊಟ ನೀಡುವುದಲ್ಲದೆ ಭೇಟಿ ನೀಡುವ ಎಲ್ಲರಿಗೂ ಊಟ ಉಪಚಾರ ನೀಡಲಾಗುತ್ತದೆ.
ಇವರು ಕೇವಲ ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಮಾಜಿಕ ಸಂಘಟನೆಗಳಲ್ಲಿ ಭಾಗಿಯಾಗಿದ್ದು ಭಾರತೀಯ ಕಿಸಾನ್ ಸಂಘದ ಅಖೀಲ ಭಾರತ ತಂಡದ ಸಕ್ರಿಯ ಸದಸ್ಯರಾಗಿದ್ದರು. ಉಡುಗೆ ತೊಡುಗೆಯಲ್ಲಿಯೂ ತಮ್ಮ ಶ್ರೀಮಂತಿಕೆ ಪ್ರದರ್ಶಿಸಿದೆ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಗುಣವೇ ಎಲ್ಲರಿಗೂ ಇಷ್ಟವಾಗುವಂತದ್ದು. ಅಲ್ಲದೆ ಕಳೆದ ಮೂವತ್ತು ವರ್ಷಗಳ ಹಿಂದೆ ಮಹಿಳೆಯರನ್ನು ಸೇರಿಸಿ ಸ್ವಸಹಾಯ ಸಂಘ ರಚಿಸಿದ್ದರು. ಅಷ್ಟೇ ಏಕೆ ಕೃಷಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೋಬರ್ ಗ್ಯಾಸ್ ಅಳವಡಿಕೆ ಮಾಡಿ ಬಳಸಿದ ಕಿರ್ತಿಕೂಡ ಇವರಿಗೆ ಸಂದಾಯವಾಗುತ್ತದೆ. ಇವರ ಕೃಷಿ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಬನ್ನೂರು ಕುರಿಗಳನ್ನು ಇಂದಿಗೂ ಸಾಕಾಣಿಕೆ ಮಾಡಿಕೊಂಡು ಬಂದಿದ್ದಾರೆ.
ಪ್ರಶಸ್ತಿಗಳು
ಇವರು ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದಾಗಿ ಸರಕಾರ 2020-21 ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಇವರು ಮಾಡಿರುವ ಕಾರ್ಯಕ್ಕೆ ಹಲವಾರು ಪ್ರಶಿ¤ಗಳು ಲಭಿಸಿವೆ. ಎಲ್.ಎಂ ಪಟೇಲ್ ಸಂಸ್ಥೆಯಿಂದ 2010ನೇ ಸಾಲಿನ “ಅತ್ಯುತ್ತಮ ರೇಷ್ಮೇ ಬೆಳೆಗಾರ’ ರಾಷ್ಟ್ರೀಯ ಪ್ರಶಸ್ತಿ, 1995-96ನೇ ಸಾಲಿನ ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರಿಯ ರೇಷ್ಮೆ ಮಂಡಳಿ ಪ್ರಶಸ್ತಿಯೂ ಲಭಿಸಿದೆ. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಸಮುದಾಯಕ್ಕೆ ಉತ್ತಮ ಪ್ರೇರಕರಾಗಿ ಆಯ್ಕೆಯಾಗಿದ್ದರು. 2007-08ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಂಸ್ಥೆಯಿಂದ ರೈತರ ಒಕ್ಕೂಟದ ಅಭಿವೃದ್ಧಿಗೆ ಉತ್ತಮ ಸಾಧನೆ ಪ್ರಶಸ್ತಿಯನ್ನೂ ಮೂಡಿಗೆರಿಸಿಕೊಂಡಿದ್ದಾರೆ.
ಇತ್ತೀಚೆಗೆ ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಮಾಡಿದ ಸಾಧನೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯ, ಸ್ವಾಭಿಮಾನದ ರಹದಾರಿಯಾಗಿದೆ. ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಅವರ ಕನಸು ನನಸಾಗಲಿ ಎಂಬುದೇ ಎಲ್ಲರ ಆಶಯ.