Advertisement

ಸಾವಯವ ಕೃಷಿಕನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

03:03 PM Oct 29, 2019 | Suhan S |

ಬಳ್ಳಾರಿ: ಬರದನಾಡಲ್ಲೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ ಜಿಲ್ಲೆಯ ಕೂಡ್ಲಿಗಿ ತಾಲೂಕು ಖಾನಹೊಸಳ್ಳಿ ರೈತ ಎಚ್‌. ವಿಶ್ವೇಶ್ವರ ಸಜ್ಜನ್‌ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಯ ಕೂಡ್ಲಿಗಿ ತಾಲೂಕು ಜಿಲ್ಲೆಯಲ್ಲೇ ಅತಿಹೆಚ್ಚು ಮಳೆಯಾಶ್ರಿತ ಪ್ರದೇಶ ಹೊಂದಿದೆ. ಸಮರ್ಪಕ ಮಳೆಯಾಗದೆ ಪ್ರತಿವರ್ಷವೂ ಬರ ಪರಿಸ್ಥಿತಿ ಆವರಿಸುವ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದಲ್ಲಿ ಸಾವಯವ ಕೃಷಿಯನ್ನು ಆರಂಭಿಸಿರುವ ವಿಶ್ವೇಶ್ವರ ಸಜ್ಜನ್‌ ಅವರು, ಐದು ಎಕರೆ ಪ್ರದೇಶದಲ್ಲಿ ಮಳೆಯಾಧಾರಿತ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದು ಅದರ ಉತ್ಪನ್ನಗಳಿಗೆ ತನ್ನದೇ ಆದ ಪ್ರತ್ಯೇಕ ಮಾರುಕಟ್ಟೆ ಮಾಡಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಐದು ಎಕರೆ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಬೇಲದ ಹಣ್ಣಿನ (ಬೆಳವಲ) ಮರಗಳನ್ನು ಬೆಳೆದಿರುವ ವಿಶ್ವೇಶ್ವರ ಸಜ್ಜನ್‌, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿ (ಕಾಡುನೆಲ್ಲಿ) ಮರಗಳು, ಒಂದು ಎಕರೆಯಲ್ಲಿ ಜಂಬೂ ನೇರಳೆ ಹಣ್ಣಿನ ಮರಗಳನ್ನು ನಾಟಿ ಮಾಡಿದ್ದಾರೆ. ಈ ಸಾವಯವ ಕೃಷಿಯಿಂದ ಬೆಳೆಯುವ ಕೇವಲ ಹಣ್ಣುಗಳನ್ನಷ್ಟೇ ಮಾರಾಟ ಮಾಡದೆ, ಆ ಹಣ್ಣುಗಳಿಂದ ಕೆಲ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಮೂಲಕ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಬೇಲದ ಹಣ್ಣಿನಿಂದ ಬೇಲ್‌ ಜ್ಯೂಸ್‌, ಬೇಲ್‌ಪೇಡ, ಬೇಲ್‌ ರಸಂ ಮತ್ತು ಬೇಲ್‌ ಟೀ ಪೌಡರ್‌ ನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಮೂಲಕ ಬರದ ನಾಡಿನಲ್ಲೂ ಕೃಷಿಯಿಂದ ಉತ್ತಮ ಆದಾಯ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಗೋ ಉತ್ಪನ್ನ: ಸಾವಯವ ಕೃಷಿಯಲ್ಲಿ ಯಶಸ್ವಿಯಾಗಿರುವ ವಿಶ್ವೇಶ್ವರ ಸಜ್ಜನ್‌, ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ದೇಶೀಯ ಮತ್ತು ಗಿರ್‌ ತಳಿಯ ಗೋವುಗಳನ್ನು ಸಾಕಿರುವ ಸಜ್ಜನ್‌ ಅವರು, ಗೋವುಗಳು ಕೊಡುವ ಹಾಲಿನಿಂದ ವಿವಿಧ ರೀತಿಯ ಉತ್ಪನ್ನವನ್ನು ಸಿದ್ಧಪಡಿಸುತ್ತಿದ್ದಾರೆ. ಗೋವುಗಳ ಹಾಲಿನಿಂದ ಪೇಡ, ಗೋಮೂತ್ರದಿಂದ ಅರ್ಕ ಮತ್ತು ತುಪ್ಪ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇವರು ವರ್ಷಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿರುವ ಸಜ್ಜನ್‌, ಜತೆಗೆ ನಾಲ್ಕೈದು ಜನರಿಗೆ ಉದ್ಯೋಗವನ್ನು ನೀಡಿದ್ದೇನೆ.  ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಬೇಡಿಕೆಯಿದೆ. ರೈತರು ತಾವು ಬೆಳೆದ ಪ್ರತಿಯೊಂದು ಬೆಳೆಗಳನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭವೂ ಗಳಿಸಬಹುದು ಎನ್ನುತ್ತಾರೆ ಸಾವಯವ ಕೃಷಿಕ, ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿರುವ ವಿಶ್ವೇಶ್ವರ ಸಜ್ಜನ್‌.

Advertisement

ಸಾಹಿತ್ಯದಲ್ಲಿ ಪದವಿ: ಹುಲಿಕೆರೆ ಗ್ರಾಮದ ಬಯುಲುಸೀಮೆಯ ಸಾವಯವ ಕೃಷಿಕ ಎಚ್‌.ವಿ.ಸಜ್ಜನ್‌ ಷಡಕ್ಷರಯ್ಯ ಎಂಬ ಶಿಕ್ಷಕ ಮಗನಾಗಿದ್ದು, ಕನ್ನಡದಲ್ಲಿ ಸ್ನಾತಕೋತ್ತರ (ಎಂಎ) ಪದವಿಯನ್ನೂ ಪಡೆದಿದ್ದಾರೆ. ತಾನು ಕಲಿತ ಕನ್ನಡ ಸಾಹಿತ್ಯವನ್ನು ಬಿಟ್ಟು ಸಾವಯವಕೃಷಿಕರಾಗಿ ಸ್ವಾವಲಂಬಿ ಕೃಷಿಯಲ್ಲಿ ಜೀವನ ಮಾಡುತ್ತಿದ್ದಾರೆ. ಸಾವಯವ ಕೃಷಿಕ ಸಜ್ಜನ್‌ ಅವರಿಗೆ ಪತ್ನಿ ಮತ್ತು ಮೂವರು ಪುತ್ರರು ಸಹ ಕೃಷಿಯಲ್ಲಿ ಉತ್ತಮ ಸಾಥ್‌ ನೀಡುತ್ತಿದ್ದು, ಅವರ ಯಶಸ್ವಿಗೆ ಕಾರಣರಾಗಿದ್ದಾರೆ.

ಕಾಡಿನಲ್ಲಿ ಬೆಳೆಯುವ ಬೇಲಾ ಹಾಗೂ ನೇರಳೆ ಹಣ್ಣಿನ ಮರಗಳನ್ನು ಅವುಗಳ ಮಹತ್ವ ಮತ್ತು ಅವಶ್ಯಕತೆಯನ್ನು ಅರಿತ ಎಚ್‌.ವಿಶ್ವೇಶ್ವರ ಸಜ್ಜನ್‌ ಅವರು, ಬೇಲಾ ಮತ್ತು ನೇರಳೆ ಮರಗಳನ್ನು ತೋಟಗಾರಿಕೆ ಬೆಳೆಯನ್ನಾಗಿಸಿ ಸಾವಯವ ಮತ್ತು ಸಹಜ ಕೃಷಿಯಲ್ಲಿ ಬೆಳೆದಿದ್ದಲ್ಲದೇ, ಬೆಳೆದ ಹಣ್ಣುಗಳು ಮತ್ತದರ ಉತ್ಪನ್ನಗಳಿಗೆ ತನ್ನದೇ ಆದ ಪ್ರತ್ಯೇಕ ಮಾರುಕಟ್ಟೆ ಸೃಷ್ಟಿಸಿಕೊಂಡು ಯಶಸ್ವಿಯಾಗಿದ್ದು, ಇದೀಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ಲಭಿಸಿರುವ ರಾಜ್ಯೋತ್ಸವ ಪ್ರಶಸ್ತಿ ಬಯಲುಸೀಮೆಯ ಕೃಷಿಕನಿಗೆ ಲಭಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next