Advertisement

ಸಾಧಕ ಪಿಡಿಒಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ

04:37 PM Nov 01, 2020 | Suhan S |

ಬೇಲೂರು: ತಾವು ಕಾರ್ಯನಿರ್ವಹಿಸುವ ಗ್ರಾಪಂಗೆ ನಾಲ್ಕು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ತಂದು ಕೊಡುವುದರ ಜೊತೆಗೆ ಗ್ರಾಮಗಳ ಸ್ವಚ್ಛತೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಿಡಿಒ ಸಿದ್ದಲಿಂಗ ಸರೂರು ತಾಲೂಕು ಆಡಳಿತ ನೀಡುವ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ತಾಲೂಕಿನ ಅಂದಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿರುವ ಸರೂರು, 2010ರಲ್ಲಿ ರಾಜನಶಿರೀಯೂರು ಪಿಡಿಒ ಆಗಿದ್ದಾಗ ಜಿಲ್ಲೆಯಲ್ಲೇ ಪ್ರಥಮವಾಗಿ ರಾಜೀವ್‌ಗಾಂಧಿ ಸೇವಾ ಕೇಂದ್ರ ಆರಂಭ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂತರದಲ್ಲಿ ತಾಲೂಕಿನ ಅಂದಲೆ ಗ್ರಾಮ ಪಂಚಾಯಿತಿಗೆ ವರ್ಗವಾದ ಬಳಿಕ 2015 -16ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ,2016-17ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ,2017-18ರಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ಕೆ 10 ಲಕ್ಷ ರೂ. ನಗದು ಬಹುಮಾನ ಪಡೆದ ಅವರು, 2018- 19 ರಲ್ಲಿ ಪುನಃ ಗಾಂಧಿ ಗ್ರಾಮ ಪುರಸ್ಕಾರ, 2019-20ನೇ ಸಾಲಿನಲ್ಲಿ ಮತ್ತೆ ಗಾಂಧಿ ಗ್ರಾಮ ಪುರಸ್ಕಾರ ಪಡೆಯುವ ಮೂಲಕ ಗ್ರಾಪಂಗೆ 25 ಲಕ್ಷ ರೂ. ನಗದು ಬಹುಮಾನ ತಂದುಕೊಟ್ಟು ಉತ್ತಮ ಹೆಸರು ಗಳಿಸಿದ್ದಾರೆ.

ಇವರ ಅಧಿಕಾರಾವಧಿಯಲ್ಲಿ ಗ್ರಾಮ ಪಂಚಾಯಿತಿಯನ್ನು ಸಾರ್ವಜನಿಕರ ಸ್ನೇಹಿ ಆಗಿ ನವೀಕರಣಗೊಳಿಸಿದ್ದು, ಬಹುಮಾನ ಬಂದಿರುವ ಹಣದಲ್ಲಿ ಗ್ರಾಪಂಗೆ ಆದಾಯ ತರುವ ದೃಷ್ಟಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ,  ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆನೇರವಾಗಿ ತಿಳಿಸಲು ಕಚೇರಿಯಲ್ಲಿ ಟಿ.ವಿ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸರ್ಕಾರದ ಮಹತ್ತರ ಯೋಜನೆಯಾದ ಮಹಾತ್ಮ ಗಾಂಧಿ, ನರೇಗಾ ಯೋಜನೆ ಅಡಿಯಲ್ಲಿ ರೈತರಿಗೆ ಅವಶ್ಯಕವಾದ ತೆಂಗು, ಅಡಕೆ, ಬದು, ಕೃಷಿ ಹೊಂಡ ನಿರ್ಮಾಣ ಮತ್ತು ವೈಯಕ್ತಿಕ ಕಾಮಗಾರಿ ನಡೆಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ 623 ಮನೆಗಳು ಇದ್ದು, ಗ್ರಾಮಗಳ ಸ್ವತ್ಛತೆ, ನೈರ್ಮಲ್ಯ ಕಾಪಾಡಲು ಚರಂಡಿ ಹಾಗೂ ಪ್ರತಿ ಮನೆಗೆ ಬಚ್ಚಲು ಗುಂಡಿ ನಿರ್ಮಾಣ ಮಾಡಿಸುವ ಮೂಲಕ ಗ್ರಾಮಗಳ ಅಭಿವೃದ್ಧಿ ಕಡೆ ಗಮನಹರಿಸಿದ್ದಾರೆ.

ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಬೈರೇಗೌಡನ ಕೊಪ್ಪಲು, ಗೊರೂರು, ಗೊರೂರು ಕೊಪ್ಪಲು, ಹಾರೋಹಳ್ಳಿ ಗ್ರಾಮಗಳನ್ನು ಬಚ್ಚಲು ನೀರು ಮುಕ್ತ ಗ್ರಾಮಗಳನ್ನಾಗಿ ಮಾಡುವ ಮೂಲಕ ಗ್ರಾಮೀಣ ಅಭಿವೃದ್ಧಿಯಲ್ಲಿ ಹೆಚ್ಚಿನ ಅಸಕ್ತಿ ತೋರಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂಎ ಪದವಿ ಪಡೆದಿರುವ ಸಿದ್ದಲಿಂಗ ಸರೂರು ಅವರ ಗ್ರಾಮೀಣ ಅಭಿವೃದ್ಧಿ ಸಾಧನೆಗೆ ತಾಲೂಕು ಆಡಳಿತ 2020-21ನೇ ಸಾಲಿನಲ್ಲಿ ನಾಗರಿಕ ಸೇವೆಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ.

ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಸಂತಸ ತಂದಿದೆ. ಜನರ ಸಮಸ್ಯೆಗೆ ಮತ್ತಷ್ಟು ಸ್ಪಂದಿಸಲು ಉತ್ತೇಜನ ನೀಡಿದಂತಾಗಿದೆ. ಸಾಧನೆಗೆ ಕಚೇರಿ ಸಿಬ್ಬಂದಿ, ಹಿಂದಿನ ಆಡಳಿತ ಮಂಡಳಿ ನೀಡಿದ ಸಂಪೂರ್ಣ ಸಹಕಾರ ಕಾರಣ ವಾಗಿದೆ. ಗ್ರಾಪಂ ಮಾದರಿ ಮಾಡಿದ್ದೇವೆ, ಗ್ರಾಮಗಳಲ್ಲಿ ಬೀದಿದೀಪ, ಸೋಲಾರ್‌ ದೀಪ ಅಳವಡಿಸಿ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಪಹಣಿ, ಜಾತಿ ಮತ್ತು

Advertisement

ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ಸೇವೆಗಳನ್ನು ಜಿಲ್ಲೆಯಲ್ಲೇ ಹೆಚ್ಚು ಒದಗಿಸಿದ್ದೇವೆ. ಇತರೆ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ಗ್ರಾಪಂ ಸಮಗ್ರ ಅಭಿವೃದ್ಧಿ ನನ್ನ ಕನಸಾಗಿದೆ. ಇದಕ್ಕೆ ಈ ಪ್ರಶಸ್ತಿ ಸ್ಫೂರ್ತಿ ಆಗಿದೆ. ಸಿದ್ದಲಿಂಗ ಸರೂರು, ಪಿಡಿಒ

 

ಡಿ.ಬಿ.ಮೋಹನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next