ಬೆಂಗಳೂರು : ರಾಜ್ಯಸಭಾ ಚುನಾವಣೆಗೆ ಲೆಹರ್ ಸಿಂಗ್ ಅವರನ್ನು ಬಿಜೆಪಿಯು ಮೂರನೇ ಅಭ್ಯರ್ಥಿಯಾಗಿ ಅಂತಿಮಗೊಳಿಸಿದ್ದು, ಅಖಾಡಕ್ಕೆ ಈಗ ರಂಗು ಬಂದಿದೆ.
ಮೂರು ಪಕ್ಷಗಳಲ್ಲೂ ತಮ್ಮ ಸ್ನೇಹಶಾಖೆ ಹೊಂದಿರುವ ಲೆಹರ್ ಸಿಂಗ್ ಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯ ಒಳ ಲೆಕ್ಕಾಚಾರ ಈಗ ಕಾಂಗ್ರೆಸನ್ನು ಕಂಗೆಡಿಸಿದೆ. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಏಜೆಂಟ್ ಗೆ ತೋರಿಸಿಯೇ ಮತ ಚಲಾಯಿಸಬೇಕಿರುವುದರಿಂದ ಅಡ್ಡಮತದಾನದ ಭೀತಿ ಕಾಂಗ್ರೆಸ್ ಗೆ ಇಲ್ಲ.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ ಆಗಿರುವುದರಿಂದ ಬಿಜೆಪಿಯ ಮೂರು ಅಭ್ಯರ್ಥಿಗಳು ಇಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೆ ಬಿ ಫಾರ್ಮ್ ಪಡೆದಿರುವ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ನಡೆ ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ.
ಇದನ್ನೂ ಓದಿ:ನಾಲ್ಕನೇ ಅಭ್ಯರ್ಥಿ ಆಟ; ಜೆಡಿಎಸ್‌ಗೆ ಕಾಂಗ್ರೆಸ್ ಶಾಕ್, 2ನೇ ಅಭ್ಯರ್ಥಿ ಕಣಕ್ಕೆ
ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರು ಜೆಡಿಎಸ್ ನಾಯಕರು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ರಾಜ್ಯಸಭಾ ಚುನಾವಣೆಯ ನಿರ್ವಹಣೆ ಎಲ್ಲಿಂದ ನಡೆಯುತ್ತಿದೆ ಎಂಬುದು ನಿಗೂಢವಾಗಿ ಉಳಿದಿದೆ.