ಹೊಸದಿಲ್ಲಿ: ಸೋಮವಾರ ಕೃಷಿ ಮಸೂದೆಯ ಅಂಗೀಕಾರದ ವೇಳೆ ರಾಜ್ಯಸಭೆ ಉಪಸಭಾಧ್ಯಕ್ಷ ಹರಿವಂಶ್ ಸಿಂಗ್‌ರೊಂದಿಗೆ ಆಕ್ಷೇಪಾರ್ಹವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಸೇರಿದಂತೆ 8 ಸದಸ್ಯರನ್ನು ಸಸ್ಪೆಂಡ್ ಮಾಡಿದ್ದು, ಅದನ್ನು ಖಂಡಿಸಿ ಅವರು ಅಹೋ ರಾತ್ರಿ ಧರಣಿ ನಡೆಸಿದ್ದು… ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಹರಿವಂಶ್ ಅವರೇ ಸ್ವತಃ ಚಹಾ ಮತ್ತು ಉಪಾಹಾರದೊಂದಿಗೆ ಧರಣಿನಿರತರ ಬಳಿ ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಂಸತ್ ಭವನದ ಹೊರಗೆ ಸೋಮವಾರ ರಾತ್ರಿಯಿಡೀ ಧರಣಿ ಕುಳಿತಿದ್ದ ಸದಸ್ಯರ ಬಳಿಗೆ ಮಂಗಳವಾರ ಬೆಳಗ್ಗೆ ಹರಿವಂಶ್ ಚಹಾದೊಂದಿಗೆ ಬಂದಿದ್ದಾರೆ. ಆದರೆ, ಅವರು ನೀಡಿದ ಚಹಾವನ್ನು ಕೆಲವು ಸಂಸದರು ಸ್ವೀಕರಿಸಲು ನಿರಾಕರಿಸಿದ್ದು, “ರೈತರಿಗೆ ಮೋಸ ಮಾಡಲಾಗುತ್ತಿದೆ. ನಾವು ಮತಗಳ ವಿಭಜನೆಗೆ ಕೋರಿದೆವು. ಆದರೆ ನಮ್ಮನ್ನು ಸಂಪೂರ್ಣವಾಗಿ ನೀವು ನಿರ್ಲಕ್ಷಿಸಿ ದಿರಿ. ಈಗ ಸ್ನೇಹ ಸಂಪಾದಿಸುವ ಸಮಯ ವಲ್ಲ, ಅನ್ನದಾತರ ಹಕ್ಕುಗಳಿಗಾಗಿ ಹೋರಾ ಡುವ ಸಮಯ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಮೆಚ್ಚುಗೆ: ಹರಿವಂಶ್ ಅವರ ಈ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಪ್ರಧಾನಿ ಮೋದಿ, “ಇದು ಅವರ ಹೃದಯ ವೈಶಾಲ್ಯತೆಯನ್ನು ತೋರಿಸಿದೆ. ಅವರ ಮುತ್ಸದ್ಧಿತನವು ಪ್ರಜಾಸತ್ತೆ ಯನ್ನು ಪ್ರೀತಿಸುವ ಪ್ರತಿಯೊಬ್ಬನಿಗೂ ಹೆಮ್ಮೆ ಉಂಟು ಮಾಡಿದೆ. ತಮ್ಮ ಮೇಲೆ ದಾಳಿ ನಡೆಸಿ, ಅವಮಾನಿಸಿದವರಿಗೆ ಚಹಾ ನೀಡುವ ಮೂಲಕ ಹರಿವಂಶ್ ಶ್ರೇಷ್ಠತೆ ಮೆರೆ ದಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಹರಿವಂಶ್ ಉಪವಾಸ: ಸೆ.20ರಂದು ರಾಜ್ಯಸಭೆಯಲ್ಲಿ ನನ್ನೊಂದಿಗೆ ಪ್ರತಿಪಕ್ಷಗಳ ನಾಯಕರು ವರ್ತಿಸಿದ ರೀತಿಯಿಂದ ಬಹ ಳಷ್ಟು ನೋವಾಗಿದೆ. ನಾನು ಮಂಗಳವಾರ 24 ಗಂಟೆ ಉಪವಾಸವಿರಲು ನಿರ್ಧರಿಸಿ ದ್ದೇನೆ. ಗದ್ದಲ ಎಬ್ಬಿಸಿದವರಲ್ಲಿ ಸ್ವಯಂ ಶುದ್ಧೀಕರಣದ ಭಾವನೆ ಮೂಡಲಿ ಎಂದು ಆಶಿಸುತ್ತೇನೆ ಎಂದು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ ಹರಿವಂಶ್ ಹೇಳಿದ್ದಾರೆ.
ಖಾಲಿ ಹುದ್ದೆ ತುಂಬಿರಿ: ದೇಶದಲ್ಲಿ ನಿರು ದ್ಯೋಗ ತಾಂಡವವಾಡುತ್ತಿದೆ. ಸರಕಾರ, ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆಯಲ್ಲಿ 20 ಲಕ್ಷ ಹುದ್ದೆ ಗಳು ಖಾಲಿಯಿದ್ದು, ಸರಕಾರ ಭರ್ತಿ ಮಾಡುತ್ತಿಲ್ಲ. ತುರ್ತಾಗಿ ಹುದ್ದೆ ಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸ ಬೇಕು ಎಂದು ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖಾಸಗಿ ಕಂಪನಿಗಳು ರೈತರಿಂದ ಆಹಾರ ಧಾನ್ಯ ಖರೀದಿಸು ವಂತಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖೀಸು ವಂಥ ಹೊಸ ವಿಧೇಯಕವನ್ನು ಸರಕಾರ ಮಂಡಿಸಬೇಕು ಮತ್ತು 8 ಸದಸ್ಯರ ಅಮಾನತನ್ನು ವಾಪಸ್ ಪಡೆಯಬೇಕು.
ಗುಲಾಂ ನಬಿ ಆಜಾದ್, “ಕೈ’ ನಾಯಕ
ರಾಜ್ಯಸಭೆಯಲ್ಲಿ ತಮ್ಮ ವರ್ತನೆಗೆ ಸಂಬಂಧಿಸಿ 8 ಮಂದಿ ವಿಪಕ್ಷಗಳ ಸದಸ್ಯರು ಕ್ಷಮೆ ಕೋರಿದರಷ್ಟೇ ಅವರ ಅಮಾನತನ್ನು ವಾಪಸ್ ಬಗ್ಗೆ ಪರಿಶೀಲಿಸಬಹುದು.
ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ