Advertisement

ಜಿಪಂ ಅಧ್ಯಕ್ಷರಾಗಿ ರಾಜೂಗೌಡ ಆಯ್ಕೆ

06:59 AM Jun 20, 2020 | Suhan S |

ಗದಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇನ್ನುಳಿದ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ನೂತನ ಅಧ್ಯಕ್ಷರಾಗಿ ಕೊಣ್ಣೂರು ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಹಾಗೂ ಯುವ ನಾಯಕ ರಾಜೂಗೌಡ ಸಂಕನಗೌಡ ಕೆಂಚನಗೌಡ್ರ ಅವಿರೋಧವಾಗಿ ಆಯ್ಕೆಯಾದರು.

Advertisement

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್‌ ಬಿಸ್ವಾಸ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಜರುಗಿತು. ಗದಗ ಜಿಪಂ ಅಧ್ಯಕ್ಷರಾಗಿದ್ದ ಸಿದ್ಧಲಿಂಗೇಶ್ವರ ಎಚ್‌. ಪಾಟೀಲ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದಸ್ಥಾನಕ್ಕೆ ರಾಜ್ಯ ಸರ್ಕಾರದ ಆದೇಶದಂತೆ ಇನ್ನುಳಿದ ಅವಧಿಗೆ ಚುನಾವಣೆ ನಡೆಸಲಾಯಿತು. ಜಿಪಂನ ಒಟ್ಟು 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ 11 ಹಾಗೂ ಬಿಜೆಪಿಯ ಐವರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟು 11 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ ಆಡಳಿತಾರೂಢ ಪಕ್ಷದಿಂದ ಕೊಣ್ಣೂರು ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಹಾಗೂ ಯುವ ನಾಯಕ ರಾಜೂಗೌಡ ಸಂಕನಗೌಡ ಕೆಂಚನಗೌಡ್ರ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದರು. ನಿಯಮಾನುಸಾರ ರಾಜೂಗೌಡ್ರ ಅವರ ನಾಮಪತ್ರ ಪರಿಶೀಲಿಸಿದ ಪ್ರಾದೇಶಿಕ ಆಯುಕ್ತರು, ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಿದರು.

ನಂತರ ಚುನಾವಣಾ ನಿಯಮಗಳ ಪ್ರಕಾರ ನಾಮಪತ್ರಹಿಂಪಡೆಯಲು ನೀಡದ್ದ ಸಮಯಾವಕಾಶ ಮುಗಿದಿದ್ದರಿಂದ ರಾಜೂಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿ, ಹೂಗುತ್ಛ ನೀಡಿ ಅಭಿನಂದಿಸಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಒ ಡಾ|ಆನಂದ್‌.ಕೆ, ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್‌ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಪಂ ಉಪಕಾರ್ಯದರ್ಶಿ ಕಲ್ಲೇಶ, ಜಿಪಂ ಹಂಗಾಮಿ ಅಧ್ಯಕ್ಷೆ ಮಲ್ಲವ್ವ ಬಿಜ್ಜೂರು, ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಎಸ್‌.ಪಿ. ಬಳಿಗಾರ, ಸಿದ್ಧಲಿಂಗೇಶ್ವರ ಎಚ್‌.ಪಾಟೀಲ, ಸದಸ್ಯರಾದ ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ಶೋಭಾ ಮೇಟಿ, ರೇಖಾ ತಿಮ್ಮರೆಡ್ಡಿ ಅಳವಂಡಿ, ಬಿಜೆಪಿ ಸದಸ್ಯರಾದ ಶಿವಕುಮಾರ ನೀಲಗುಂದ, ಪಡಿಯಪ್ಪ ಪೂಜಾರ, ರೇಣುಕಾ ಶಿವಪುತ್ರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಬೆಂಬಲಿಗರು ಹೂಗುಚ್ಛ ನೀಡಿ, ಶುಭ ಕೋರಿದರು.

ನೆರೆ ಪರಿಹಾರದ ಭರವಸೆ: ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೂಗೌಡ ಕೆಂಚನಗೌಡ್ರ, ಜಿಲ್ಲೆಯ ನೆರೆ ಪೀಡಿತ ನರಗುಂದ ಮತ್ತು ರೋಣ ತಾಲೂಕಿನ ನೆರೆ ಪೀಡಿತ ಗ್ರಾಮಗಳಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವುದು, ಗ್ರಾಮೀಣ ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಾರ್ಯಗಳಿಗೆ ಒತ್ತು ನೀಡಲಾಗುವುದು. ಈ ಹಿಂದೆ ಸಿದ್ದು ಪಾಟೀಲ ಅವರು ಅಧ್ಯಕ್ಷರಾಗಿದ್ದಾಗ ನೆರೆ ಪೀಡಿತ ಗ್ರಾಮಗಳ ಜನರ ಆಸ್ತಿ ಹಾಗೂ ಕುಡಿಯುವ ನೀರಿನ ಕರವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಜಿಪಂ ಠರಾವು ಸಲ್ಲಿಸಲಾಗಿತ್ತು. ಈ ಬಗ್ಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಈ ಕುರಿತು ಮರು ಪರಿಶೀಲಿಸಿ, ಸರಕಾರದ ಮೇಲೆ ಒತ್ತಡ ತರುವ ಕೆಲಸ ಮಾಡವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next