ಬೆಂಗಳೂರು: ಕಾಗವಾಡ ಮಾಜಿ ಶಾಸಕ ರಾಜು ಭರಮಗೌಡ ಕಾಗೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗುರುವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹರಾಗಿದ್ದಾರೆ. ಅವರು ಅನರ್ಹರಾಗಿಯೇ ಚುನಾವಣೆ ಎದುರಿಸಬೇಕು. ಅನರ್ಹರು ಎಂಬ ಹಣೆಪಟ್ಟಿಕಟ್ಟಿಕೊಂಡು ಜನರಿಗೆ ಹೇಗೆ ಮುಖ ತೋರಿಸುತ್ತಾರೆ ಎಂದು ಪ್ರಶ್ನಿಸಿದರು.
ರಾಜು ಕಾಗೆ 4 ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾರೆ. ಅವರು ಯಾವುದೇ ಷರತ್ತು ವಿಧಿಸದೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ಆಗಮನದಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗಲಿದೆ ಎಂದು ಹೇಳಿದರು.
ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ನನಗೆ ಅವಕಾಶ ಕೊಟ್ಟ ನಾಯಕರಿಗೆ ಧನ್ಯವಾದ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಪಕ್ಷ ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
-ರಾಜು ಕಾಗೆ, ಕಾಗವಾಡ ಕ್ಷೇತ್ರದ ಮಾಜಿ ಶಾಸಕ.
ರಾಜು ಕಾಗೆ ಪಕ್ಷ ಸೇರ್ಪಡೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಅವರು ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.