Advertisement

ಕಾಗವಾಡದ ಗೂಡು ಬಚ್ಚಿಟ್ಟು ಕೊಂಡ ಕಾಗೆ

11:29 AM Nov 17, 2019 | Suhan S |

ಬೆಳಗಾವಿ: ಗಡಿ ತಾಲೂಕು ಕಾಗವಾಡದ ಜನ ಪ್ರವಾಹದ ಹೊಡೆತಕ್ಕೆ ಸಿಕ್ಕು ನರಳುತ್ತಿದ್ದು, ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಇಂಥದರಲ್ಲಿ ಈಗ ಮತ್ತೆ ಚುನಾವಣೆಯ ಕಾವು ತಾಲೂಕಿಗೆ ಮೆತ್ತಿಕೊಂಡಿದೆ. ಕಾಗೆಯ ಗೂಡು ಕಾಗವಾಡ ಕ್ಷೇತ್ರಕ್ಕೆ ಕೈ ಹಾಕಲು ಮೀಸೆ ಮಾವ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಯತ್ನಿಸಿದರೂ ಯಶಸ್ವಿಯಾಗದೇ ಕಾಗೆ ತನ್ನ ಗೂಡನ್ನು ಭದ್ರವಾಗಿರಿಸಿಕೊಂಡಿದ್ದಾರೆ.

Advertisement

ಪ್ರತಿಷ್ಠೆಯ ಕ್ಷೇತ್ರವಾಗಿರುವ ಇಲ್ಲಿ ಮತದಾರರು ಕಳೆದ ಸಲ ಗೆದ್ದವರನ್ನು ಸೋಲಿಸ್ತಾರೋ, ಸೋತವರನ್ನು ಗೆಲ್ಲಿಸುತ್ತಾರೋ ಎಂಬ ಕುತೂಹಲ ರಾಜಕೀಯ ಮುಖಂಡರನ್ನು ಕಾಡುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಕಮಲಕ್ಕೆ ಬಿದ್ದ ಹೊಡೆತದ ಬಿಸಿ ಇಲ್ಲಿಯೂ ತಟ್ಟಲಿದೆಯೇ ಎಂಬ ಪ್ರಶ್ನೆ ಹರಿದಾಡುತ್ತಿದೆ.

ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಚಿಕ್ಕೋಡಿಯ ಮಾಜಿ ಸಚಿವ ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರು ಶ್ರೀಮಂತ ವಿರುದ್ಧ ನಿಲ್ಲಲು ಶತಾಯಗತಾಯ ಪ್ರಯತ್ನ ನಡೆಸಿದ್ದರು. ಇನ್ನೂವರೆಗೆ ಹೈಕಮಾಂಡ್‌ ಮಟ್ಟದಲ್ಲಿ ಪ್ರಕಾಶ ಹುಕ್ಕೇರಿಯ ಹೆಸರೇ ಕೇಳಿ ಬರುತ್ತಿದ್ದರೂ ಕಾಗೆಗೆ ಟಿಕೆಟ್‌ ಘೋಷಣೆಯಾಗಿದೆ. ಹುಕ್ಕೇರಿಗೆ ಕಾಗವಾಡ, ಕಾಗೆಗೆ ಅಥಣಿ ಕ್ಷೇತ್ರದ ಟಿಕೆಟ್‌ ಹಂಚಿಕೆ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಈಗ ಕಾಗೆ ತಮ್ಮ ಗೂಡು ಭದ್ರಪಡಿಸಿಕೊಂಡಿದ್ದಾರೆ.

ಕೈ-ಕಮಲ ಮಧ್ಯೆ ಸಂತ್ರಸ್ತರ ಒದ್ದಾಟ: ಜೆಡಿಎಸ್‌, ಕಾಂಗ್ರೆಸ್‌ ಬಳಿಕ ಈಗ ಬಿಜೆಪಿ ಬಾಗಿಲಿಗೆ ಹೋಗಿರುವ ಕಾಗವಾಡದ ಮಾಜಿ ಶಾಸಕ ಶ್ರೀಮಂತ ಪಾಟೀಲ ಕಮಲ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಸಲ ಸೋತಿರುವ ಬಿಜೆಪಿಯ ಶಿಸ್ತಿನ ಸಿಪಾಯಿ ರಾಜು ಕಾಗೆ ಕಾಂಗ್ರೆಸ್‌ನತ್ತ ವಾಲಿದ್ದಾರೆ. ಕಮಲ, ಕೈ ಮಧ್ಯೆ ಈ ಭಾಗದ ಸಂತ್ರಸ್ತರು ಒದ್ದಾಡುತ್ತಿದ್ದಾರೆ. ಇದೆಲ್ಲದರ ನಡುವೆ ನಮ್ಮ ಬದುಕು ಹಸನಾಗಲಿ ಎಂಬುದೇ ಮತದಾರರ ಆಶಯ. ನೆರೆ ಸಂಕಷ್ಟದಿಂದ ಇನ್ನೂ ಹೊರ ಬಾರದ ಸಂತ್ರಸ್ತರ ನೆರವಿಗೆ ಬಾರದ ಶ್ರೀಮಂತ ಪಾಟೀಲ ವಿರುದ್ಧ ರಾಜು ಕಾಗೆ ತೊಡೆ ತಟ್ಟಿದ್ದಾರೆ. ಆರು ಸಲ ಚುನಾವಣೆಗೆ ಸ್ಪರ್ಧಿಸಿ ನಾಲ್ಕು ಬಾರಿ ವಿಧಾನಸಭೆ ಮೆಟ್ಟಿಲೇರಿದ್ದ ಕಾಗೆಗೆ ಇದು 7ನೇ ಸ್ಪರ್ಧೆ. ಶ್ರೀಮಂತ ಪಾಟೀಲ ಮೊದಲು ಜೆಡಿಎಸ್‌, ಕಾಂಗ್ರೆಸ್‌ದಿಂದ ಸ್ಪರ್ಧಿಸಿದ್ದರು. ಈಗ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಮುಂಬೈ ರೆಸಾರ್ಟ್‌ಮೆಲಕು: ಕಾಂಗ್ರೆಸ್‌ ಗೂ ಕಾಗೆ ಮೇಲೆ ಅತೀವ ವಿಶ್ವಾಸವಿದ್ದು, ಬಿಜೆಪಿಯ ಶ್ರೀಮಂತ ಪಾಟೀಲರ ನೆಗೆಟಿವ್‌ ಪಾಯಿಂಟ್ಸ್‌ಗಳನ್ನೇ ಮುಂದಿಟ್ಟುಕೊಂಡು ಕಾಗೆಗೆ ಜೈ ಎಂದಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ನ‌ ಆಶೀರ್ವಾದ ಪಡೆದು ಕ್ಷೇತ್ರಕ್ಕೆ ಧುಮುಕಿರುವ ಕಾಗೆ ಬಗ್ಗೆ ಕಳೆದ ಸೋಲಿನ ಅನುಕಂಪವೂ ಇದೆ. ಆಗಸ್ಟ್‌ದಿಂದ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಭೀಕರ ಪ್ರವಾಹ ಅಪ್ಪಳಿಸಿತ್ತು.

Advertisement

ಕಾಗವಾಡ ತಾಲೂಕಿನ ಅನೇಕ ಹಳ್ಳಿಗಳು ಕೃಷ್ಣಾ ನದಿ ನೀರಿನಿಂದ ಸಮಸ್ಯೆ ಅನುಭವಿಸಿವೆ. ಇಂಥದರಲ್ಲಿ ಕ್ಷೇತ್ರದ ಜನರ ಕಣ್ಣೀರು ಒರೆಸುವ ಬದಲು ಶ್ರೀಮಂತ ಪಾಟೀಲರು ಮುಂಬೈ ರೆಸಾರ್ಟ್‌ನಲ್ಲಿದ್ದರು ಎಂಬ ಆರೋಪ ಕಾಗೆ ಬೆಂಬಲಿಗರಿಂದ ಕೇಳಿ ಬರುತ್ತಿದೆ. ಇದೇ ಅಸ್ತ್ರ ಇಟ್ಟುಕೊಂಡು ಕಾಗೆ ಪ್ರಚಾರಕ್ಕಿಳಿದಿದ್ದಾರೆ. ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ರಾಜು ಕಾಗೆ, ಚುನಾವಣೆ ಎಂದರೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದಂತೆ. ಆರು ಸಲ ಚುನಾವಣೆಗೆ ನಿಂತಿರುವ ಅನುಭವ ನನಗಿದೆ. ನಂಬಿಕೊಂಡು ಬಂದಿದ್ದ ಪಕ್ಷ ಟಿಕೆಟ್‌ ಕೊಡದಿದ್ದಾಗ ಅನಿವಾರ್ಯವಾಗಿ ಕಾಂಗ್ರೆಸ್‌ ಸೇರಬೇಕಾಯಿತು. ಎಲ್ಲ ಪಕ್ಷಗಳಲ್ಲಿಯೂ ನನ್ನ ಹೆಸರು ಚೆನ್ನಾಗಿದೆ. ಯಾರೊಂದಿಗೂ ನಾನು ವೈರತ್ವ ಬೆಳೆಸಿಕೊಂಡವನಲ್ಲ. ಈಗ ನನಗೆ ಟಿಕೆಟ್‌ ಘೋಷಣೆಯಾಗಿದ್ದು ಸಂತಸ ತಂದಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಮಂತ ಪಾಟೀಲ, ಶಾಸಕನಾಗಿರುವ ಅವಧಿ ಕಡಿಮೆ ಇದ್ದರೂ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಿನಿಂದ ಅನುದಾನ ತಂದು ಕೆಲಸ ಮಾಡಿಸಿದ್ದೇನೆ. 23 ಹಳ್ಳಿಗಳ ಕೆರೆ ತುಂಬಿಸುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದ್ದು, ಮತ್ತೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

 

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next