ನಟ ಗುರುನಂದನ್ ಅಭಿನಯಿಸುತ್ತಿರುವ ಮುಂದಿನ ಹೊಸ ಸಿನಿಮಾ “ರಾಜು ಜೇಮ್ಸ್ ಬಾಂಡ್’. ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.
ಸಂಜಿತ್ ಹೆಗ್ಡೆ ಸ್ವರದಲ್ಲಿ ಮೂಡಿಬಂದ “ಕಣ್ಮಣಿ ಇಷ್ಟ ನಂಗೆ ನಿನ್ನ ಮುದ್ದು ಕೀಟಲೆ’ ಎಂಬ ಹಾಡಿನಲ್ಲಿ ಗುರುನಂದನ್ ಹಾಗೂ ನಾಯಕ ನಟಿ ಮೃದುಲ ಬಹಳ ರೋಮ್ಯಾಂಟಿಕ್ ಆಗಿ ಅಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ದೀಪಕ್ ಮಧುವನಹಳ್ಳಿ, “ಜ್ಯೋತಿ ವ್ಯಾಸರಾಜ್ ಬರೆದಿರುವ ಕಣ್ಮಣಿ ಎಂಬ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮುರಳಿ ಮಾಸ್ಟರ್ ಈ ಮನಮೋಹಕ ಹಾಡಿಗೆ ನೃತ್ಯ ಸಂಯೋಜಸಿದ್ದಾರೆ. ಲಂಡನ್ ಸುತ್ತಮುತ್ತಲಿನ ಜಾಗದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ’ ಎಂದರು.
“ಈ ಹಾಡಿನಲ್ಲಿ ನಾನು ಚೆನ್ನಾಗಿ ನೃತ್ಯ ಮಾಡಿದ್ದೀನಿ ಅಂದರೆ ಅದಕ್ಕೆ ಮುರಳಿ ಮಾಸ್ಟರ್ ಕಾರಣ. ನಮ್ಮ ಚಿತ್ರ ಡಿಸೆಂಬರ್ ಕೊನೆಯಲ್ಲೇ ಬಿಡುಗಡೆಯಾಗ ಬೇಕಿತ್ತು. ಆದರೆ ಎರಡು ದೊಡ್ಡ ಚಿತ್ರಗಳು ಅದೇ ಸಮಯಕ್ಕೆ ಬಂದಿ ದ್ದರಿಂದ ನಮ್ಮ ಚಿತ್ರದ ಬಿಡುಗಡೆ ಮುಂದೆ ಹೋಯಿತು. ಫೆಬ್ರವರಿ 14 ಚಿತ್ರ ಬಿಡುಗಡೆಯಾಗಲಿದೆ’ ಎಂದರು ನಾಯಕ ಗುರುನಂದನ್.
ನಿರ್ಮಾಪಕ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರು ಮಾತನಾಡಿ, “ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ನೇಪಾಳಿ ಭಾಷೆಗೂ ನಮ್ಮ ಚಿತ್ರದ ರೈಟ್ಸ್ ಮಾರಾಟವಾಗಿದೆ. ಕರ್ನಾಟಕದಲ್ಲಿ ಸತ್ಯ ಪಿಕ್ಚರ್ಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.
ನಾಯಕಿ ಮೃದುಲ, ನೃತ್ಯ ನಿರ್ದೇಶಕ ಮುರಳಿ ಹಾಗೂ ವಿತರಕ ಸತ್ಯಪ್ರಕಾಶ್ ತಮ್ಮ ಮಾತು ಹಂಚಿಕೊಂಡರು.