ಸುರಪುರ: ತಾಲೂಕಿನ ಚಿಕನಳ್ಳಿ, ಬೈಚಬಾಳ, ಕನ್ನೆಳ್ಳಿ, ಕೂಡಲಗಿ ಸೇರಿದಂತೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಇತರೆ ಗ್ರಾಮಗಳಿಗೆ ಶಾಸಕ ರಾಜುಗೌಡ ಭೇಟಿ ನೀಡಿ ಮಳೆ ಹಾನಿ ಪ್ರದೇಶ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕಿನ ಚಿಕನಳ್ಳಿ ಮತ್ತು ಬೈಚಬಾಳ ಗ್ರಾಮದ ಹತ್ತಿರದಲ್ಲಿ ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಭತ್ತದ ಬೆಳೆ ಹಾಳಾಗಿರುವುದನ್ನು ವೀಕ್ಷಿಸಿದರು. ಭತ್ತ, ಹತ್ತಿ, ಸೂರ್ಯಕಾಂತಿ, ಶೇಂಗಾ ತೊಗರಿ ಬೆಳೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿರುವ ಕುರಿತು ರೈತರಿಂದ ಮಾಹಿತಿ ಪಡೆದರು.
ಈ ವೇಳೆ ಶಾಸಕ ರಾಜುಗೌಡ ಮಾತನಾಡಿ, ಬೆಳೆ ಹಾಳಾಗಿರುವ ಯಾವೊಬ್ಬ ರೈತರು ಚಿಂತಿಸ ಬೇಕಿಲ್ಲ. ಬೆಳೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಆರ್. ಅಶೋಕ ಅವರೊಂದಿಗೆ ಮಾತನಾಡಿದ್ದೇನೆ ಅವರು ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಬೆಳೆ ನಷ್ಟದ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೇ ಮಾಡಲು ಸೂಚಿಸಿದ್ದೇನೆ. ಹಾಳಾಗಿರುವ ಸೇತುವೆ, ರಸ್ತೆಗಳ ಬಗ್ಗೆ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಯವರಿಗೆ ತಿಳಿಸಿದ್ದೇನೆ. ಇನ್ನೆಡರಡು ದಿನಗಳಲ್ಲಿ ಬೆಳೆ ನಷ್ಟ ಕುರಿತು ಸಂಪೂರ್ಣ ಮಾಹಿತಿ ಕೈ ಸೇರಲಿದೆ. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಪರಿಹಾರ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಮೇಲಪ್ಪ ಗುಳಗಿ, ಮುಖಂಡರಾದ ಎಚ್.ಸಿ. ಪಾಟೀಲ, ಸಿದ್ದನಗೌಡ ಕರಿಭಾವಿ, ಕೃಷ್ಣಾ ರೆಡ್ಡಿ, ಇತರರಿದ್ದರು.