ಸುರೇಶ್ ನಿರ್ಮಾಣದ “ರಾಜು ಕನ್ನಡ ಮೀಡಿಯಂ’ಗೆ ಮೆಚ್ಚುಗೆ ಸಿಕ್ಕಿದೆ. ಈ ಖುಷಿ ಒಂದು ಕಡೆಯಾದರೆ, ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಚಿತ್ರ ರಿಮೇಕ್ ಆಗುವ ಸುದ್ದಿಯೂ ಬಂದಿದೆ ಇದು ಇನ್ನೊಂದು ಖುಷಿ. ಈ ಮಾತನ್ನು ಸ್ವತಃ ನಿರ್ಮಾಪಕ ಸುರೇಶ್ ಅವರೇ ಸ್ಪಷ್ಟಪಡಿಸಿದ್ದಾರೆ.
ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, “ಮೊದಲು ರಿಮೇಕ್‌ಗೆ ಆಫರ್ ಬಂದಿದ್ದು ತೆಲುಗಿನಿಂದ. ಇಲ್ಲಿ ಸುದೀಪ್ ಅವರು ಮಾಡಿದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರಿಂದ ಮಾಡಿಸುವ ಮೂಲಕ ಚಿತ್ರ ಮಾಡುವ ಕುರಿತು ಅಲ್ಲಿಂದ ಚರ್ಚೆ ಆಗಿದೆ.
“ಶಿವಲಿಂಗ’ ಚಿತ್ರವನ್ನು ಅಲ್ಲಿಗೆ ಮಾಡಲು ರೈಟ್ಸ್ ತೆಗೆದುಕೊಂಡ ಕಂಪೆನಿಯು ಈ ಆಫರ್ ನೀಡಿರುವುದು ನಿಜ. ಹಾಗೇನಾದರೂ ಎಲ್ಲಾ ಮಾತುಕತೆ ಪಕ್ಕಾ ಆಗಿಬಿಟ್ಟರೆ, ತೆಲುಗಿನಲ್ಲೂ ನಾನೇ ಆ ಕಂಪೆನಿ ಜತೆಗೂಡಿ ನಿರ್ಮಾಣ ಮಾಡ್ತೀನಿ.
“ಈಗ’ ದಲ್ಲಿ ಮಾಡಿದ್ದ ಸಮಂತ, ನಾಣಿಯ ಜತೆಗೆ ಇಲ್ಲಿ ಮಾಡಿರುವ ಪಾತ್ರವನ್ನು ಅಲ್ಲೂ ಸುದೀಪ್ ಅವರಿಂದಲೇ ಮಾಡಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ’ ಎಂದು ತೆಲುಗು ಅವತರಣಿಕೆಗೆ ಬಂದ ಅವಕಾಶ ಕುರಿತು ಸ್ಪಷ್ಟಪಡಿಸುತ್ತಾರೆ ಸುರೇಶ್. ಇದಷ್ಟೇ ಅಲ್ಲ, ಈಗಾಗಲೇ ಸುದ್ದಿಯಾಗಿರುವಂತೆ, “ರಾಜು ಕನ್ನಡ ಮೀಡಿಯಂ’ ಬಾಲಿವುಡ್‌ನಲ್ಲೂ ಸದ್ದು ಮಾಡಲಿದೆ.
ಇದು ಎಷ್ಟರ ಮಟ್ಟಿಗೆ ನಿಜ? ಈ ಪ್ರಶ್ನೆಗೆ ಉತ್ತರಿಸುವ ಸುರೇಶ್, “ಈಗಾಗಲೇ ಅಮೀರ್‌ಖಾನ್ ಪ್ರೊಡಕ್ಷನ್‌ನಿಂದ ನಮಗೆ ಆಫರ್ ಕೂಡ ಬಂದಿದೆ. ಈ ಹಿಂದೆ ನಾವು ಸುದೀಪ್ ಅವರಿದ್ದ ಟ್ರೇಲರ್ ಬಿಡುಗಡೆ ಮಾಡಿದ್ದಾಗಲೇ, ಆಮೀರ್‌ಖಾನ್ ಪ್ರೊಡಕ್ಷನ್‌ನಿಂದ ವರುಣ್ ಎಂಬುವವರು ನಮ್ಮೊಂದಿಗೆ ಮಾತನಾಡಿದ್ದರು.
ಇತ್ತೀಚೆಗೆ ಅವರು ಚಿತ್ರವನ್ನೂ ನೋಡಿ ಹೋಗಿದ್ದಾರೆ. ಒಟ್ಟಾರೆ ಯಾವುದೇ ಭಾಷೆಗೆ ನಮ್ಮ ಸಿನಿಮಾ ರಿಮೇಕ್ ಆಗುತ್ತೆ ಅಂದರೆ, ನಾವು ಕೊಡೋಕೆ ರೆಡಿ. ನಮ್ಮ ಕನ್ನಡ ಚಿತ್ರ ಬೇರೆ ಭಾಷೆಯಲ್ಲೂ ಸದ್ದು ಮಾಡುವುದಾದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ’ ಎನ್ನುತ್ತಾರೆ ಸುರೇಶ್.