ಕಾಸರಗೋಡು: ಬಾಲ್ಯದಿಂದಲೇ ಕನ್ನಡ ಹಾಗೂ ಆಂಗ್ಲ ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಗಳಿಸಿಕೊಂಡು ನೂರಾರು ಕವನ ಹಾಗೂ ಪ್ರಬಂಧಗಳನ್ನು ಬರೆದು ಪ್ರಕಟಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ರಾಜ್ಯಶ್ರೀ ಕುಳಮರ್ವ ಅವರ ಕೃತಿ ‘ಬಂಡೂಲ’ವು ಬೆಂಗಳೂರಿನ ‘ವಾಡಿಯಾ’ ಸಭಾಂಗಣದಲ್ಲಿ ಬಿಡುಗಡೆಗೊಂಡಿತು.
ಅಂತಾರಾಷ್ಟ್ರೀಯ ಖ್ಯಾತಿಯ ಬಹುಭಾಷಾ ವಿದ್ವಾಂಸರಾದ ಪ್ರೊ| ಷ. ಶೆಟ್ಟರ್ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ ಸೂಕ್ಷ್ಮವಾದ ವಿಮರ್ಶೆಯನ್ನೂ ಮಾಡುವುದರೊಂದಿಗೆ ಸಾಹಿತ್ಯವು ಪ್ರಪಂಚವನ್ನೇ ಬೆಸೆಯುವ ಒಂದು ಸದೃಢವಾದ ಸೇತುವೆ, ಈ ನಿಟ್ಟಿನಿಲ್ಲಿ ಗಡಿನಾಡಿನ ಯುವ ಪ್ರತಿಭೆ ರಾಜ್ಯಶ್ರೀ ಕುಳಮರ್ವ ಅವರ ‘ಬಂಡೂಲ’ವು ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸುವುದರಲ್ಲಿ ಸಂದೇಹವಿಲ್ಲ ಎಂಬುದಾಗಿ ಪ್ರೋತ್ಸಾಹಕ ನುಡಿಗಳನ್ನಾಡಿದರು.
ಇತ್ತೀಚೆಗಿನ ದಿನಗಳಲ್ಲಿ ಕನ್ನಡಿಗರಲ್ಲಿ ಕನ್ನಡತನ ಮಾಯವಾಗುತ್ತಿದೆ. ಕೇವಲ ಕನ್ನಡಿಗನಾಗಿದ್ದರೆ ಸಾಲದು, ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ನಾಡಿನಲ್ಲಿ ಕನ್ನಡತನವಿರುವ ಕನ್ನಡಿಗರ ಸಂಖ್ಯೆ ಇಳಿಮುಖವಾಗುತ್ತಿರುವಾಗ ಗಡಿನಾಡಿನ ಪ್ರತಿಭೆಯ ಕಾರ್ಯ ಸ್ತುತ್ಯರ್ಹವಾಗಿದೆ ಎಂದು ಅವರು ತಿಳಿಸಿದರು. ಪಾಶ್ಚಾತ್ಯ ಲೇಖಕಿ ವಿಕಿ ಕಾನ್‌ಸ್ಟಂಟೇನ್ ಕ್ರುಕ್ ಅವರ ಆಂಗ್ಲ ಗ್ರಂಥದ ಸಮರ್ಥವಾದ ಕನ್ನಡಾನುವಾದ ‘ಬಂಡೂಲ’ ಕೃತಿಯು ಛಂದ ಪುಸ್ತಕಗಳ ಬಿಡುಗಡೆಯ ಸರಣಿ ಸಮಾರಂಭದಲ್ಲಿ ನೆರೆದ ಊರ ಪರವೂರ ನೂರಾರು ಹಿರಿಯ ಸಾಹಿತಿಗಳ ಮತ್ತು ಸಾವಿರಾರು ಸಾಹಿತ್ಯಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಂಡದ್ದು ಗಡಿನಾಡಿಗೆ ಸಂದ ಗೌರವವೆಂದು ವಿದ್ವಾಂಸರೆಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿ ಶುಭಹಾರೈಸಿದರು.
ಖ್ಯಾತ ನಾಟಕಗಾರ ಹಾಗೂ ಸಮನ್ವಯಗಾರ ಎಸ್. ಸುರೇಂದ್ರನಾಥ ಅವರು ಈ ಬಾರಿಯ ‘ಛಂದ ಪುಸ್ತಕ ಬಹುಮಾನ ವಿಜೇತ ಸ್ವಾಮಿ ಪೊನ್ನಾಚಿ, ವಿಕ್ರಮ ಹತ್ವಾರ ಮತ್ತು ರಾಜ್ಯಶ್ರೀ ಕುಳಮರ್ವ ಅವರೊಡನೆ ನಡೆಸಿದ ಸಂವಾದ ಕಾರ್ಯಕ್ರಮವು ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ಉದಯೋನ್ಮುಖರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಛಂದ ಪುಸ್ತಕದ ಮಾಲಕರೂ ಖ್ಯಾತ ಕಥೆಗಾರರೂ ಆದ ವಸುಧೇಂದ್ರ ಅವರು ಸಮಾರಂಭವನ್ನು ಸಂಯೋಜಿಸಿದ್ದರು.
ಅಶ್ವತ್ಥ್ ಸುಬ್ರಹ್ಮಣ್ಯ ನಿರೂಪಣೆಗೈದರು. ಕಲಾವಿದ ನೀನಾಸಂ ಗಣೇಶ್ ಅವರು ರಾಮಾಯಣ ದರ್ಶನಂ ಮಹಾಕಾವ್ಯದ ಆಯ್ದ ಭಾಗದ ಭಾವಪೂರ್ಣವಾಗಿ ವಾಚನಗೈದರು.
ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕನ್ನಡದಲ್ಲೇ ಪೂರೈಸಿದ ನಾನು ಸಾಹಿತ್ಯಾಸಕ್ತಿಯನ್ನು ಬಾಲ್ಯದಲ್ಲಿಯೇ ಬೆಳೆಸಿಕೊಂಡೆ. ನನ್ನ ಅಪ್ಪ ವಿ.ಬಿ. ಕುಳಮರ್ವ ಅವರು ಸಾಹಿತ್ಯ ವ್ಯವಸಾಯವನ್ನು ಮಾಡುವುದರೊಂದಿಗೆ ಎಲ್ಲೇ ಸಾಹಿತ್ಯ ಕಾರ್ಯಕ್ರಮಗಳಿದ್ದರೂ ನನ್ನನ್ನು ಕರೆದೊಯ್ಯುತ್ತಿದ್ದರು. ಬೇಕಾದಷ್ಟು ಉತ್ತಮ ಪುಸ್ತಕಗಳನ್ನೂ ಕೊಡಿಸುತ್ತಿದ್ದುದು ಮಾತ್ರವಲ್ಲದೆ ಹಿರಿಯ ಸಾಹಿತಿಗಳ ಪರಿಚಯವನ್ನೂ ಮಾಡಿಸುತ್ತಿದ್ದುದು ನನ್ನ ಸಾಹಿತ್ಯಾಸಕ್ತಿಗೆ ಪ್ರೇರಣೆಯಾಯಿತು. ಸಾಹಿತಿಗಳಾದ ವಸುಧೇಂದ್ರ ಅವರು ವಿಕಿ ಕ್ರುಕ್ ಅವರ ‘ಎಲಿಫೆಂಟ್ ಕಂಪೆನಿ’ ಎಂಬ ಆಂಗ್ಲ ಗ್ರಂಥವೊಂದನ್ನು ನನಗಿತ್ತರು. ಅದನ್ನು ಓದಿ ಬಹುವಾಗಿ ಮೆಚ್ಚಿಕೊಂಡ ನಾನು ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಹೇಗೆ ಎಂದು ಆಲೋಚಿಸಿದೆ. ವಸುಧೇಂದ್ರ ಅವರಲ್ಲಿ ನನ್ನ ಮನದಿಂಗಿತವನ್ನು ವ್ಯಕ್ತಪಡಿಸಿದಾಗ ಲಭಿಸಿದ ಪ್ರೋತ್ಸಾಹದಿಂದ 448 ಪುಟಗಳ ಈ ಬೃಹತ್ ಗ್ರಂಥ ಹೊರಬರಲು ಕಾರಣವಾಯಿತು.
– ರಾಜ್ಯಶ್ರೀ ಕುಳಮರ್ವ, ಲೇಖಕಿ