ಶ್ರೀನಗರ: ಶ್ರೀನಗರಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಜತೆಗೆ ಯೋಧರೊಬ್ಬರ ಶವ ಪೆಟ್ಟಿಗೆಯನ್ನು ಕೊಂಚ ದೂರ ಹೊತ್ತುಕೊಂಡೂ ಹೋಗಿದ್ದಾರೆ. ಈ ಫೋಟೋ, ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೃಹ ಸಚಿವರ ಜತೆಗೆ ರಾಜ್ಯಪಾಲ ಮಲಿಕ್, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ, ಸಿಆರ್‌ಪಿಎಫ್ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್, ಇದ್ದರು. ಇದೇ ವೇಳೆ ಕಾಶ್ಮೀರದಲ್ಲೇ ಕೆಲವರಿಗೆ ಐಎಸ್‌ಐ ಹಾಗೂ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕವಿದೆ. ಭಯೋತ್ಪಾದನೆಯ ವಿರುದ್ಧ ನಾವು ಹೋರಾಟವನ್ನು ತೀಕ್ಷ್ಣಗೊಳಿಸುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಇನ್ನು ಮುಂದೆ ಸೇನಾ ಸಿಬಂದಿ ಸಾಗುವಾಗ ಹೆದ್ದಾರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ ಎಂದೂ ಸಿಂಗ್ ಹೇಳಿದ್ದಾರೆ. ಪಾಕಿಸ್ಥಾನದಿಂದ ಹಣ ಪಡೆಯುತ್ತಿರುವವರಿಗೆ ಭದ್ರತೆ ನೀಡಲಾಗುತ್ತಿದೆ ಮತ್ತು ಐಎಸ್‌ಐ ಚಟುವಟಿಕೆಗಳ ಮೇಲೆ ಕಣ್ಗಾವಲು ತೀವ್ರಗೊಳಿಸಲಾಗುತ್ತದೆ ಎಂದಿದ್ದಾರೆ.