Advertisement

ರಾಜ್‌ಕೋಟ್‌: ಗೆದ್ದರೆ ಭಾರತ “ಸರಣಿ ರಾಜ’

12:12 PM Nov 04, 2017 | Team Udayavani |

ರಾಜ್‌ಕೋಟ್‌: ನ್ಯೂಜಿಲ್ಯಾಂಡ್‌ ವಿರುದ್ಧ ಇನ್ನೂ ಟಿ20 ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಕಳಂಕವನ್ನು ಭಾರತ ಬುಧವಾರ ರಾತ್ರಿ ಫಿರೋಜ್‌ ಷಾ ಕೋಟ್ಲಾದಲ್ಲಿ ಹೊಡೆದೋಡಿಸಿದೆ. ಇದೇ ಆತ್ಮವಿಶ್ವಾಸ, ರಣೋತ್ಸಾಹದಲ್ಲಿ ಕೊಹ್ಲಿ ಪಡೆ ಶನಿವಾರ ರಾಜ್‌ಕೋಟ್‌ನಲ್ಲಿ 2ನೇ ಚುಟುಕು ಕ್ರಿಕೆಟ್‌ ಪಂದ್ಯಕ್ಕೆ ಅಣಿಯಾಗಿದೆ. ಇನ್ನೊಂದೆಡೆ ನ್ಯೂಜಿಲ್ಯಾಂಡ್‌ ಸರಣಿ ಸಮಬಲಗೊಳಿಸುವ ತೀವ್ರ ಒತ್ತಡದೊಂದಿಗೆ ಕಣಕ್ಕಿಳಿಯಬೇಕಾದ ಸ್ಥಿತಿಯಲ್ಲಿದೆ.

Advertisement

ಕೋಟ್ಲಾದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ 53 ರನ್ನುಗಳ ಜಯಭೇರಿ ಮೊಳಗಿಸಿದ್ದನ್ನು ಮರೆಯುವಂತಿಲ್ಲ. ರಾಜ್‌ಕೋಟ್‌ ಕೂಡ ದೊಡ್ಡ ಮೊತ್ತದ ಪಂದ್ಯವಾಗುವ ಸಾಧ್ಯತೆ ಇದೆ. ದಿಲ್ಲಿಯಂತೆ ಇಲ್ಲಿಯೂ ಟಾಸ್‌ ನಿರ್ಣಾಯಕ. ಮೊದಲು ಬ್ಯಾಟಿಂಗ್‌ ನಡೆಸಿ ಉತ್ತಮ ಸ್ಕೋರ್‌ ದಾಖಲಿಸುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ರಾತ್ರಿಯ ಮಂಜು ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೂ ಕೋಟ್ಲಾದಲ್ಲಿ ಆತಿಥೇಯರು “ಮಂಜಿಗೆ ಗೋಲಿ ಮಾರೋ’ ಎಂಬಂತೆ ಮುನ್ನುಗ್ಗಿ ಹೋದದೊªಂದು ಹೆಚ್ಚುಗಾರಿಕೆ.

2007ರ ಚೊಚ್ಚಲ ಟಿ20 ವಿಶ್ವ ಚಾಂಪಿಯನ್‌ ಆದರೂ ಭಾರತಕ್ಕೆ ನ್ಯೂಜಿಲ್ಯಾಂಡ್‌ ವಿರುದ್ದ ಗೆಲುವು ಮರೀಚಿಕೆಯಾಗಿಯೇ ಉಳಿದಿತ್ತು. ಇದನ್ನೊಂದು ಭಾರೀ ಸವಾಲಿನ ರೀತಿಯಲ್ಲಿ ಸ್ವೀಕರಿಸಿದ ಭಾರತ ಕೋಟ್ಲಾದಲ್ಲಿ ಗೆಲುವಿನ ಕೋಟೆಗೆ ಲಗ್ಗೆ ಹಾಕಿದ್ದು ಈಗ ಇತಿಹಾಸ. ಇದರೊಂದಿಗೆ ಎಡಗೈ ವೇಗಿ ಆಶಿಷ್‌ ನೆಹ್ರಾ ಅವರಿಗೆ ಶುಭ ವಿದಾಯ ಹೇಳಿದ ಹಿರಿಮೆಯೂ ಟೀಮ್‌ ಇಂಡಿಯಾದ್ದಾಯಿತು. 

ಆರಂಭಿಕರಾದ ರೋಹಿತ್‌ ಶರ್ಮ-ಶಿಖರ್‌ ಧವನ್‌ ಜೋಡಿಯ ಅಮೋಘ ಬ್ಯಾಟಿಂಗ್‌ ಭಾರತದ ಸ್ಕೋರನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಭಾರೀ ಮೊತ್ತವನ್ನೇ ಕಂಡು ಅರ್ಧ ಸೋತಿದ್ದ ಬ್ಲ್ಯಾಕ್‌ಕ್ಯಾಪ್ಸ್‌ ಮೇಲೆ ಬುಮ್ರಾ, ಚಾಹಲ್‌, ಅಕ್ಷರ್‌ ಪಟೇಲ್‌ ಬೌಲಿಂಗ್‌ ಅಸ್ತ್ರ ಪ್ರಯೋಗಿಸಿದರು. ವಿದಾಯ ಪಂದ್ಯವಾಡಿದ ನೆಹ್ರಾ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ವಿಕೆಟ್‌ ಬೇಟೆಯಾಡಿದರು. ಕಿವೀಸ್‌ಗೆ ನೂರೈವತ್ತರ ಗಡಿಯನ್ನೂ ತಲುಪಲಾಗಲಿಲ್ಲ. ನ್ಯೂಜಿಲ್ಯಾಂಡ್‌ ಟಿ20ಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಸೋತಿತು.

ನೆಹ್ರಾ ಸ್ಥಾನಕ್ಕೆ ಯಾರು?
ರಾಜ್‌ಕೋಟ್‌ನಲ್ಲಿ ಭಾರತದ ಬೌಲಿಂಗ್‌ ವಿಭಾಗದಲ್ಲಿ ಒಂದು ಪರಿವರ್ತನೆ ಆಗಲೇಬೇಕಿದೆ. ನೆಹ್ರಾ ಬಿಟ್ಟುಹೋದ ಸ್ಥಾನ ತುಂಬುವವರ್ಯಾರು ಎಂಬುದೊಂದು ಕುತೂಹಲ. ವೇಗಿಯೇ ಬೇಕಿದ್ದರೆ ಮೊಹಮ್ಮದ್‌ ಸಿರಾಜ್‌ ಪಾದಾರ್ಪಣೆ ಬಹುತೇಕ ಖಚಿತ. ಸ್ಪಿನ್ನರ್‌ಗೆ ಅವಕಾಶ ನೀಡುವುದಾದರೆ ಕುಲದೀಪ್‌ ಯಾದವ್‌ ಇದ್ದಾರೆ. ಹೆಚ್ಚುವರಿ ಬ್ಯಾಟ್ಸ್‌ಮನ್‌ ರೂಪದಲ್ಲಿ ದಿನೇಶ್‌ ಕಾರ್ತಿಕ್‌ ಅಥವಾ ಮನೀಶ್‌ ಪಾಂಡೆ ಒಳಬರುವ ಸಾಧ್ಯತೆಯೂ ಇದೆ.

Advertisement

ಭಾರತದ ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆ ಅನುಮಾನ. ಆದರೆ ಬ್ಯಾಟಿಂಗ್‌ ಕ್ರಮಾಂಕದಲ್ಲಿ ನಡೆಸು ತ್ತಿರುವ ಪ್ರಯೋಗಗಳಿಗೆ ಸಣ್ಣದೊಂದು “ಬ್ರೇಕ್‌’ ಅಗತ್ಯ. ಕೋಟ್ಲಾದಲ್ಲಿ ಪಾಂಡ್ಯ ಅವರನ್ನು ವನ್‌ಡೌನ್‌ನಲ್ಲಿ ಕಳುಹಿಸಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಪಾದಾರ್ಪಣ ಪಂದ್ಯ ಕಂಡ ಶ್ರೇಯಸ್‌ ಅಯ್ಯರ್‌ ಅವರಿಗೆ ಬ್ಯಾಟಿಂಗ್‌ ಅವಕಾಶ ನೀಡಬಹುದಿತ್ತಾದರೂ ಅವರಿಗೆ ಕ್ರೀಸ್‌ ಇಳಿಯುವ ಅದೃಷ್ಟವೇ ಒದಗಿ ಬರಲಿಲ್ಲ. ರೋಹಿತ್‌-ಧವನ್‌ ಇಬ್ಬರೇ 17ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ಇದೆಲ್ಲ ಅನಿವಾರ್ಯವಾಗಿತ್ತು ಎನ್ನಬಹುದು.

ಕಿವೀಸ್‌ ಸಕಲ ವೈಫ‌ಲ್ಯ
ಕೋಟ್ಲಾದಲ್ಲಿ ಭಾರತಕ್ಕೆ ಕಡಿವಾಣ ಹಾಕುವಲ್ಲಿ ಕಿವೀಸ್‌ ಬೌಲರ್‌ಗಳು ಸಂಪೂರ್ಣ ವಿಫ‌ಲವಾಗಿದ್ದರು. ಐಶ್‌ ಸೋಧಿ ಹೊರತುಪಡಿಸಿ ಉಳಿದವರೆಲ್ಲ ಸಖತ್ತಾಗಿ ದಂಡಿಸಿಕೊಂಡರು. ಬೌಲಿಂಗ್‌ನಲ್ಲಿ ಮಿಂಚದೆ ನ್ಯೂಜಿಲ್ಯಾಂಡಿಗೆ ಮೇಲುಗೈ ಅಸಾಧ್ಯ. 
ಬ್ಯಾಟಿಂಗ್‌ನಲ್ಲಂತೂ ನ್ಯೂಜಿಲ್ಯಾಂಡಿನದ್ದು ಫ್ಲಾಪ್‌ ಶೋ. ಬೃಹತ್‌ ಸ್ಕೋರ್‌ ಎದುರಿರುವಾಗ ಆರಂಭಿಕರಲ್ಲಿ ಒಬ್ಬರಾದರೂ ಕ್ರೀಸ್‌ ಆಕ್ರಮಿಸಿಕೊಳ್ಳುವುದು ಅತ್ಯಗತ್ಯ. ಆದರೆ ಇಲ್ಲಿ ಗಪ್ಟಿಲ್‌, ಮುನ್ರೊ ಇಬ್ಬರೂ ವಿಫ‌ಲರಾದರು. 18 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಉಳಿದವರ ಮೇಲೆ ಒತ್ತಡ ಹೆಚ್ಚುತ್ತ ಹೋಯಿತು. ಎಡಗೈ ಬ್ಯಾಟ್ಸ್‌ಮನ್‌ ಲ್ಯಾಥಂ ಮಾತ್ರ ಎಂದಿನ ಲಯದಲ್ಲಿ ಸಾಗಿ ಸರ್ವಾಧಿಕ 39 ರನ್‌ ಹೊಡೆದರು. ಆದರೆ ಕಿವೀಸ್‌ ಬ್ಯಾಟಿಂಗ್‌ ಕ್ಲಿಕ್‌ ಆಗಬೇಕಾದರೆ ಲ್ಯಾಥಂ ಒಬ್ಬರೇ ಆಡಿದರೆ ಸಾಲದು!

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಕುಲದೀಪ್‌ ಯಾದವ್‌/ಮೊಹಮ್ಮದ್‌ ಸಿರಾಜ್‌.

ನ್ಯೂಜಿಲ್ಯಾಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಲ್ಯಾಥಂ, ಟಾಮ್‌ ಬ್ರೂಸ್‌/ರಾಸ್‌ ಟಯ್ಲರ್‌, ಹೆನ್ರಿ ನಿಕೋಲ್ಸ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್, ಐಶ್‌ ಸೋಧಿ.

Advertisement

Udayavani is now on Telegram. Click here to join our channel and stay updated with the latest news.

Next