Advertisement

ಜಿಡಿಪಿ ಕನಿಷ್ಠ ಮಟ್ಟಕ್ಕಿಳಿಯಲು ನೋಟು ಅಮಾನ್ಯ ಕಾರಣವಲ್ಲ

06:40 AM Sep 02, 2017 | Team Udayavani |

ಹೊಸದಿಲ್ಲಿ: “ದೇಶದ ಜಿಡಿಪಿ ಕುಸಿಯಲು ನೋಟುಗಳ ಅಮಾನ್ಯ ನಿರ್ಧಾರ ಕಾರಣ ವಲ್ಲ. ಏಕೆಂದರೆ, ಅಪನಗದೀಕರಣದ ಎಫೆಕ್ಟ್ ಇದ್ದಿದ್ದು ಕೇವಲ 6 ವಾರಗಳು ಮಾತ್ರ.’

Advertisement

ಇದು ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ರಾಜೀವ್‌ ಕುಮಾರ್‌ ಅವರ ಮಾತು. ಅರವಿಂದ ಪನಗಾರಿಯಾ ಅವರ ರಾಜೀನಾಮೆಯಿಂದ ತೆರವಾದ ಆಯೋಗದ ಉಪಾಧ್ಯಕ್ಷ ಸ್ಥಾನವನ್ನು ತುಂಬಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್‌ ಅವರು, “ನೋಟು ಅಮಾನ್ಯಕ್ಕೆ ಸಂಬಂಧಿಸಿ ಯಾವುದೇ ಪ್ರಶ್ನೆ ಕೇಳಬಾರದು. ಕೇಳಿದರೂ ಅದಕ್ಕೆ ನಾನು ಉತ್ತರಿಸುವುದಿಲ್ಲ,’ ಎಂದು ಆರಂಭದಲ್ಲೇ ನುಡಿದರು. 

ಆದರೂ, ಸುದ್ದಿಗಾರರು ಜಿಡಿಪಿ ಕುಸಿಯಲು ಅಪನಗದೀಕರಣ ಕಾರಣವೇ ಎಂದು ಒತ್ತಿ ಒತ್ತಿ ಪ್ರಶ್ನಿಸಿ ದಾಗ ಅನಿವಾರ್ಯವಾಗಿ ಅವರು ಉತ್ತರಿಸ ಬೇಕಾಗಿ ಬಂತು. “ಒಟ್ಟು ದೇಶೀಯ ಉತ್ಪನ್ನ ಕುಸಿತವಾಗಲು ಅಪನಗದೀಕರಣ ಕಾರಣವಲ್ಲ. ಅದರ ಎಫೆಕ್ಟ್ ಇದ್ದಿದ್ದು ನವೆಂಬರ್‌ನಿಂದ ಜನವರಿವರೆಗೆ ಮಾತ್ರ’ ಎಂದರು. ಜತೆಗೆ, ಪ್ರಸಕ್ತ ವರ್ಷ ಉತ್ತಮ ಮುಂಗಾರು ಸುರಿದಿದ್ದು, ಜಿಎಸ್‌ಟಿ ಕುರಿತ ಗೊಂದಲ ಗಳೂ ನಿವಾರಣೆಯಾಗಲಿರುವ ಕಾರಣ 2ನೇ ತ್ತೈಮಾಸಿಕ(ಜುಲೈ-ಸೆಪ್ಟೆಂಬರ್‌)ದಲ್ಲಿ ಜಿಡಿಪಿ ಶೇ7ರಿಂದ ಶೇ.7.5ಕ್ಕೆ ಏರಿಕೆಯಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಗುರುವಾರ ಬಿಡುಗಡೆಯಾದ ಮಾಹಿತಿಯಂತೆ ಮೊದಲ ತ್ತೈಮಾಸಿಕದ ಜಿಡಿಪಿ 3 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.5.7ಕ್ಕೆ ಕುಸಿದಿತ್ತು.

ಜಿಡಿಪಿ ಕುಸಿತಕ್ಕೆ ಆರ್ಥಿಕ ಅವ್ಯವಸ್ಥೆ ಕಾರಣ: ನೋಟು ಅಮಾನ್ಯ ಸೇರಿ ಪ್ರಧಾನಿ ಮೋದಿ ಸರಕಾರದ ಆರ್ಥಿಕ ಅವ್ಯವಸ್ಥೆಯೇ ಜಿಡಿಪಿ ಕುಸಿತಕ್ಕೆ ಕಾರಣ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ. ಅಪನಗದೀಕರಣದಿಂದಾಗಿ ಯುವಕರು, ಬಡವರು, ಅಸಂಘಟಿತ ವಲಯದ ಕಾರ್ಮಿ ಕರು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿದರೇ ವಿನಾ, ತೆರಿಗೆ ತಪ್ಪಿಸಿಕೊಂಡವರು, ಸಾಲದ ಸುಸ್ತಿದಾರರ ಮೇಲೆ ಇದು ಯಾವ ಪರಿಣಾಮವನ್ನೂ ಬೀರಲಿಲ್ಲ ಎಂದೂ ಹೇಳಿದ್ದಾರೆ.

10 ವರ್ಷದ ಜಿಡಿಪಿ ಅಂಕಿಅಂಶ ಬಿಡುಗಡೆ ಮಾಡಿ: ಕಾಂಗ್ರೆಸ್‌
ಜಿಡಿಪಿ ಕುಸಿಯುತ್ತಿದ್ದರೂ, ಕೇಂದ್ರ ಸರಕಾರವು ಆರ್ಥಿಕತೆಯನ್ನು ಹಳಿಗೆ ತರಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ. ಜತೆಗೆ, ಈ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವಂತೆಯೂ ಆಗ್ರಹಿಸಿದೆ. ಶುಕ್ರವಾರ ಮಾತನಾಡಿದ ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ, “ಜಿಡಿಪಿಯನ್ನು ಲೆಕ್ಕ ಹಾಕುವಂಥ ಹಳೆಯ ಮತ್ತು ಹೊಸ ಕ್ರಮಗಳನ್ನು ಆಧರಿಸಿ ಕೇಂದ್ರ ಸರಕಾರವು ಕೂಡಲೇ ಕಳೆದ 10 ವರ್ಷಗಳ ಜಿಡಿಪಿ ಅಂಕಿಅಂಶಗಳನ್ನು ಬಿಡುಗಡೆ ಮಾಡಬೇಕು. ಹಳೆಯ ಮಾನದಂಡವನ್ನು ಅನುಸರಿಸಿದರೆ, ಕಳೆದ 6 ತ್ತೈಮಾಸಿಕಗಳಲ್ಲಿ ದೇಶದ ಜಿಡಿಪಿಯು ಶೇ.4.3ರಷ್ಟು ಮಾತ್ರವೇ ಇದೆ,’ ಎಂದು ಹೇಳಿದ್ದಾರೆ. ಜತೆಗೆ, ಪ್ರಧಾನಿ ಮೋದಿ ಅವರು ದೇಶದ ಜನರಿಗೆ ದ್ರೋಹ ಎಸಗಿದ್ದಾರೆ. ಇಡೀ ದೇಶವನ್ನೇ ಹಿಂದಕ್ಕೆ ಎಳೆದಿರುವ ಮೋದಿ ಸರಕಾರವು, ಯುವಕರಿಗಿದ್ದ ಅವಕಾಶಗಳ ಬಾಗಿಲುಗಳನ್ನೇ ಮುಚ್ಚಿಬಿಟ್ಟರು ಎಂದೂ ಶರ್ಮಾ ಆರೋಪಿಸಿದ್ದಾರೆ.

Advertisement

ಜಿಎಸ್‌ಟಿಯ ಲಾಭವು ಜನಸಾಮಾನ್ಯನಿಗೆ ತಲುಪಬೇಕು. ತೆರಿಗೆ ಇಲಾಖೆಯು ಪ್ರಾಮಾಣಿಕ ತೆರಿಗೆದಾರ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು.
– ನರೇಂದ್ರ ಮೋದಿ, ಪ್ರಧಾನಿ

ದೇಶದ ಆರ್ಥಿಕ ಬೆಳವಣಿಗೆ ಮೂರು ವರ್ಷದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ ಸಂಗತಿ. ನೋಟು ಅಮಾನ್ಯಕ್ಕೆ ಭಾರೀ ಬೆಲೆ ತೆರುತ್ತಿದ್ದೇವೆ.
– ಕೌಶಿಕ್‌ ಬಸು, ವಿಶ್ವಬ್ಯಾಂಕ್‌ ಮಾಜಿ ಮುಖ್ಯ ಆರ್ಥಿಕ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next