ಅಂಬ್ಲಿಮೊಗರು: ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವುದು ಸರಕಾರದ ಕರ್ತವ್ಯ. ಪಂಚಾಯತ್ ಜನಪ್ರತಿನಿಧಿಗಳ, ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಕೈ ಜೋಡಿಸಿದರೆ ಮಾತ್ರ ಮಾದರಿ ಗ್ರಾಮವನ್ನಾಗಿ ರೂಪಿಸಲು ಸಾಧ್ಯ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಅಂಬ್ಲಿಮೊಗರು ಪಂಚಾಯತ್ ವಠಾರದಲ್ಲಿ ನಡೆದ ಅಂಬ್ಲಿಮೊಗರು ಗ್ರಾ.ಪಂ.ಇದರ ನೂತನವಾಗಿ ನಿರ್ಮಾಣಗೊಂಡಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ, ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಅಂಬ್ಲಿಮೊಗರು ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಐದು ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 15 ಸಾವಿರ ಬಡವರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯತ್‌ಗೆ ಆದಾಯ ಬರಬೇಕಾದರೆ ಮೊಬೈಲ್ ಟವರ್ ಗಳಿಗೆ 15ರಿಂದ 20 ಸಾವಿರ ರೂ. ತೆರಿಗೆ ವಿಧಿಸಬೇಕಿದ್ದರೂ, ಕಂಪನಿಯವರು ನ್ಯಾಯಾಲಯದ ಹೆಸರಲ್ಲಿ ಯಾವುದೋ ಆಂಗ್ಲಪತ್ರ ತೋರಿಸುತ್ತಾರೆ. ಎಷ್ಟು ತೆರಿಗೆ ವಿಧಿಸಬೇಕು ಎನ್ನುವುದನ್ನು ಗ್ರಾಮಸಭೆಗಳಲ್ಲಿ ನಿರ್ಣಯಿಸಬೇಕು ಎಂದರು.
ತಾ. ಪಂ. ಅಧ್ಯಕ್ಷ ಮಹಮ್ಮದ್ ಮೋನು, ಸೋಮೇಶ್ವರ ಜಿಲ್ಲಾ ಪಂಚಾಯತ್ ಸದಸ್ಯ ಧನಲಕ್ಷ್ಮೀ, ಹರೇಕಳ ಅಂಬ್ಲಿಮೊಗರು ತಾ.ಪಂ. ಸದಸ್ಯ ಶಶಿಪ್ರಭಾ ಡಿ. ಶೆಟ್ಟಿ, ಭೂ ನ್ಯಾಯಮಂಡಳಿ ಸದಸ್ಯ ಸುದರ್ಶನ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೀತಾರಾಮ ಸಾಲ್ಯಾನ್, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ, ಮಂಗಳೂರು ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಸದಾನಂದ, ಪ್ರೊಬೇಷನರಿ ಅಧಿಕಾರಿ ಪ್ರೊ| ಜ್ಞಾನೇಂದ್ರ, ವಿಶೇಷ ಅಭ್ಯಾಗತರಾಗಿ ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮೀ ದೇಗುಲದ ಮೊಕ್ತೇಸರ ಪದ್ಮನಾಭ ರೈ, ಕುಂಡೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಸ್ವಾಗತ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೀತಾರಾಮ ಸಾಲ್ಯಾನ್, ಉಪಾಧ್ಯಕ್ಷೆ ಯಶೋದಾ ಉಪಸ್ಥಿತರಿದ್ದರು.ಅಧ್ಯಕ್ಷ ಎಸ್. ಮಹಮ್ಮದ್ ರಫಿಕ್ ಪ್ರಸ್ತಾವನೆಗೈದರು. ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ವಂದಿಸಿದರು.