ಮಡಿಕೇರಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಬೆಟ್ಟಗೇರಿ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ ಪ್ರಾಸ್ತವಿಕವಾಗಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಮಾನೋಭಾವದ ನಾಗರಿಕ ರನ್ನು ಒಟ್ಟುಗೂಡಿಸುವುದು ಸಂಘಟನೆಯ ಮೂಲ ಉದ್ದೇಶ ಎಂದು ತಿಳಿಸಿದರು. ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಾಜಿ ಮಂಡಲ ಪ್ರಧಾನರಾದ ಮುಂಜಾಂದಿರ ಸಿ. ಕಾರ್ಯಪ್ಪ (ಚಿಕ್ಕು) ಮಾತನಾಡಿ, ಪ್ರಸ್ತುತ ದಿನ ಗಳಲ್ಲಿ ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನ ಬರುತ್ತಿದ್ದು, ಅಧಿಕಾರ ವ್ಯಾಪ್ತಿ ವಿಸ್ತರಣೆಗೊಂಡಿದೆ. ಇಂಥ ಸಂದರ್ಭದಲ್ಲಿ ಗ್ರಾ.ಪಂ ಪ್ರತಿನಿಧಿಗಳು ಉತ್ಸಾಹದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳ ಬೇಕೆಂದು ಕರೆ ನೀಡಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಕಲ್ ರಮಾನಾಥ್ ಅವರ ಸಮ್ಮುಖದಲ್ಲಿ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪುದಿನೆರವನ ಆಶಾ, ಯುವ ಕಾಂಗ್ರೆಸ್ ವಲಯಾ ಧ್ಯಕ್ಷರನ್ನಾಗಿ ಬೊಳ್ಳಂಡ ನವೀನ್ ನಾಚಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಾಪಂಡ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಮೀನಾ, ಗ್ರಾ.ಪಂ ಅಧ್ಯಕ್ಷರಾದ ಶಾಂತಿ, ಕರ್ತಂಡ ಶೈಲಾ, ಹಿರಿಯ ಕಾಂಗ್ರೆಸ್ ಮುಖಂಡರಾದ, ನೈಯಣಿರ ಗೋಪಾಲ, ಡಿಸಿಸಿ ಸದಸ್ಯರಾದ ಬಿದ್ದಂಡ ಸುಮಿತಾ ಮಾದಪ್ಪ, ಗ್ರಾ.ಪಂ ಸದಸ್ಯರಾದ ತೆನ್ನಿರ ರಮೇಶ್, ಸರಸ್ವತಿ, ಮಾಜಿ ವಲಯಾಧ್ಯಕ್ಷರಾದ ಕೇಟೊಳಿ ಮೋಹನ್ ರಾಜ್, ಮಾಜಿ ಗ್ರಾ.ಪಂ. ಸದಸ್ಯರಾದ ಬಿದ್ದಂಡ ಮಾದಪ್ಪ, ಬ್ಲಾಕ್ ಕಾಂಗ್ರೆಸ್ ಸದಸ್ಯರಾದ ಪಿ.ಎ. ಮೊಹಮ್ಮದ್ ಕುಂಞಿ, ಚಳಿಯಂಡ ಚಿನ್ನಪ್ಪ, ಎಚ್.ಬಿ. ಸಿದ್ದಯ್ಯ, ಕುಂಜಿಲನ ನಾಗೇಶ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.