Advertisement

ಫಲಾನುಭವಿಗಳಿಗಿಲ್ಲ ನಿವೇಶನ ಹಕ್ಕು ಪತ್ರ

03:03 PM Sep 27, 2022 | Team Udayavani |

ಹುನಗುಂದ: ಬಡ ಕುಟುಂಬಗಳಿಗೆ ನೆರಳಾಗಬೇಕಿದ್ದ ಸರ್ಕಾರದ ಮಹತ್ವದ ರಾಜೀವ ಗಾಂಧಿ ವಸತಿ ಯೋಜನೆಯಡಿ ಹುನಗುಂದ ಪುರಸಭೆ ಮೂಲಕ 881 ವಸತಿ ರಹಿತ ಮತ್ತು ಫಲಾನುಭವಿಗಳನ್ನು ಆಯ್ಕೆ ಮಾಡಿ ನಾಲ್ಕು ವರ್ಷ ಕಳೆದರೂ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಪಡೆಯುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ.

Advertisement

ನಿವೇಶನಕ್ಕೆ ಗುರುತಿಸಿದ ಜಾಗೆಯನ್ನು ಅಭಿವೃದ್ಧಿಪಡಿಸಿ, ನೀಲನಕ್ಷೆಯಂತೆ ನಿವೇಶನ ಗುರುತಿಸದಿರುವುದು ಹಕ್ಕುಪತ್ರಗಳ ವಿಳಂಬಕ್ಕೆ ಕಾರಣ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

ಪಟ್ಟಣದಲ್ಲಿ ವಸತಿ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡುವ ಉದ್ದೇಶದಿಂದ ಪಟ್ಟಣದ ಹೊರವಲಯದ ಗುಡ್ಡದಲ್ಲಿರುವ ರಿ.ಸ ನಂ. 580ರಲ್ಲಿ 22 ಎಕರೆ ಭೂಮಿ ಗುರುತಿಸಿ ಅಲ್ಲಿ ಫಲಾನುಭವಿಗಳಿಗೆ ನಿವೇಶನ ನೀಡಲು ನಿರ್ಧರಿಸಿ 2018ರಲ್ಲಿಯೇ 881 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2018 ಮಾ. 22ರಂದು ಅಂದಿನ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡು, ಸಾಂಕೇತಿಕವಾಗಿ 10-15 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿತ್ತು. ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಮುಗಿದು ನಾಲ್ಕು ವರ್ಷಗಳು ಕಳೆದರೂ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗದಿರುವುದು ಮಾತ್ರ ವಿಪರ್ಯಾಸವೇ ಸರಿ.

ನಿವೇಶನ ಅಭಿವೃದ್ಧಿಪಡಿಸಿಲ್ಲ, ಹಕ್ಕುಪತ್ರಗಳ ವಿತರಣೆ ವಿಳಂಬಕ್ಕೆ ನಾನಾ ರಾಜಕೀಯ ಕಾರಣಗಳ ಮಾತುಗಳು ಕೇಳಿ ಬರುತ್ತಿದ್ದರೂ ನಿವೇಶನಕ್ಕೆ ಗುರುತಿಸಿದ ಭೂಮಿಯನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಪ್ಲಾಟ್‌ಗಳನ್ನು ಗುರುತಿಸದಿರುವುದು ಮೂಲ ಕಾರಣ.

ನಿವೇಶನಕ್ಕೆ ಗುರುತಿಸಿದ 22 ಎಕರೆ ಭೂಮಿ ಸಂಪೂರ್ಣ ಗುಡ್ಡದಲ್ಲಿ ಮುಳ್ಳು ಕಂಟಿಗಳಿದ್ದ ಕಾರಣ ಅದನ್ನು ಸಮತಟ್ಟು ಮಾಡದೆ ನೀಲನಕ್ಷೆಯಂತೆ ನಿವೇಶನ ಗುರುತಿಸಲು ಸಾಧ್ಯವಾಗಿಲ್ಲ. 14.56 ಲಕ್ಷ ರೂ. ಖರ್ಚು ಮಾಡಿ 22 ಎಕರೆಯಲ್ಲಿ 14 ಎಕರೆಯನ್ನು ಸಮತಟ್ಟು ಮಾಡಲಾಗಿದೆ ಎಂದು ಪುರಸಭೆಯ ದಾಖಲೆ ಹೇಳುತ್ತಿದೆ. ವಾಸ್ತವದಲ್ಲಿ ಆ ಪ್ರಮಾಣದ ಭೂಮಿ ಸಮತಟ್ಟು ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಾಕಿ ಉಳಿದ 8 ಎಕರೆ ಭೂಮಿ ಇನ್ನು ಗುಡ್ಡವಾಗಿಯೇ ಉಳಿದಿರುವುದರಿಂದ ಅಲ್ಲಿ ನಿವೇಶನಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

Advertisement

ಫಲಾನುಭವಿ ಆಯ್ಕೆ ಮಾಡಿದ್ದೆ ಸಾಧನೆ: ಮನೆ ಇಲ್ಲದ ಬಡ ಕುಟುಂಬಗಳಿಗೆ ವಸತಿ ನೀಡುವ ಮೂಲಕ ವಸತಿ ರಹಿತ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಗುರಿಯೊಂದಿಗೆ ರಾಜ್ಯ ಸರ್ಕಾರ ಪ್ರತಿ ವರ್ಷವೂ ಇದಕ್ಕಾಗಿ ಗುರಿ ನಿಗದಿಪಡಿಸುತ್ತಿದೆ. ಆದರೆ, ಹುನಗುಂದ ಪುರಸಭೆ ಮಟ್ಟಿಗೆ ಫಲಾನುಭವಿಗಳ ಆಯ್ಕೆ ಮಾಡಿದ್ದೇ ಸಾಧನೆ ಎನ್ನುವಂತಾಗಿದೆ. ಹೊರತು ಯೋಜನೆಯ ಲಾಭ ಫಲಾನುಭವಿಗಳಿಗೆ ಮಾತ್ರ ತಟ್ಟುತ್ತಿಲ್ಲ.

ಯಾವುದೇ ಯೋಜನೆಯಲ್ಲಿ ಫಲಾನುಭವಿಗಳಿಗೆ ನಿವೇಶ ನೀಡಬೇಕಾದರೆ ಅದಕ್ಕಾಗಿ ಗುರುತಿಸಿದ ಜಾಗೆಯಲ್ಲಿ ನೀಲನಕ್ಷೆಯಂತೆ ನಿವೇಶನಗಳನ್ನು ಗುರುತಿಸುವುದರ ಜತೆಗೆ ಆ ಪ್ರದೇಶದಲ್ಲಿ ರಸ್ತೆ, ನೀರು, ವಿದ್ಯುತ್‌ ಸಂಪರ್ಕ ಸೇರಿ ಇತರ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಕೆವಲ 14 ಎಕರೆ ಜಾಗೆಯನ್ನು ಸಮತಟ್ಟು ಮಾಡಿದ್ದನ್ನು ಬಿಟ್ಟರೆ ಇತರ ಯಾವುದೇ ಕಾರ್ಯಗಳು ಇಲ್ಲಿ ಇದುವರೆಗೂ ಆಗದಿರುವುದರಿಂದ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ನೀಡಿದರೂ ಅವರ ನಿವೇಶನ ಇದೆ ಎಂದು ಗುರುತಿಸಲು ಸಾಧ್ಯವಿಲ್ಲ. ಹೀಗಾದರೆ ಯಾವ ಪುರುಷಾರ್ಥಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಆಡಳಿತ ವ್ಯವಸ್ಥೆ ಮತ್ತು ಪುರಸಭೆ ಅಧಿಕಾರಿಗಳು ಉತ್ತರಿಸಬೇಕಿದೆ.

ನಿವೇಶನಕ್ಕೆ ಗುರುತಿಸಿದ ಜಾಗೆಯಲ್ಲಿ ಮೂಲಸೌಲಭ್ಯಗಳ ಕೊರತೆಯ ಮದ್ಯೆ ರಾಜಕೀಯ ಕಾರಣಗಳೂ ಇವೆ ಎಂಬ ಮಾತುಗಳಿವೆ. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಶಾಸಕರಾಗಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ 2018ರಲ್ಲಿ ಜರುಗಿದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸದೇ ತರಾತುರಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಮಾಡಿದ್ದಾರೆ ಎಂಬ ಮಾತುಗಳಿವೆ. ನಂತರ ನಡೆದ ಚುನಾವಣೆಯಲ್ಲಿ ಅವರು ಪರಾಭವಗೊಂಡು ದೊಡ್ಡನಗೌಡ ಪಾಟೀಲರು ಶಾಸಕರಾಗಿ ಆಯ್ಕೆಗೊಂಡಿದ್ದು ಹಕ್ಕುಪತ್ರ ವಿತರಣೆ ವಿಳಂಬಕ್ಕೆ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಜತೆಗೆ ಉದ್ದೇಶಿತ ಸ್ಥಳದಲ್ಲಿ ನಿವೇಶನಗಳನ್ನು ಗುರುತಿಸಿ, ಆ ಪ್ರದೇಶವನ್ನು ಅಭಿವೃದ್ಧಿಪಡಿಸಿಲ್ಲ. ಹಕ್ಕುಪತ್ರ ನೀಡಿದರೂ ಫಲಾನುಭವಿ ತನ್ನ ನಿವೇಶನ ಗುರುತಿಸಲು ಸಾಧ್ಯವಿಲ್ಲ. ಫಲಾನುಭವಿಗಳ ಆಯ್ಕೆ ಸೇರಿ ನಿವೇಶನ ನಿರ್ಮಿಸುವ ಸ್ಥಳದ ಅಭಿವೃದ್ಧಿಗೆ ಖರ್ಚು ಮಾಡಿದ ಹಣದ ಕುರಿತು ತನಿಖೆ ನಡೆಸುವಂತೆ ಈಗಿನ ಶಾಸಕ ದೊಡ್ಡನಗೌಡ ಪಾಟೀಲ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಕೊಂಡಿರುವುದರಿಂದ ಜಿಲ್ಲಾಡಳಿತ ಹಕ್ಕುಪತ್ರ ತಡೆ ಹಿಡಿದಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಹಕ್ಕುಪತ್ರಗಳು ಪುರಸಭೆ ಕಚೇರಿಯಲ್ಲಿಯೇ ಇದ್ದರೂ ಫಲಾನುಭವಿಗಳಿಗೆ ನೀಡಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ವಸತಿ ಯೋಜನೆ ಕಾರ್ಯಗತವಾಗದಿರುವುದು ದುರಂತ. ಈ ಕುರಿತು ಸರ್ಕಾರ ಮತ್ತು ಜಿಲ್ಲಾಡಳಿತ ಗಮನ ಹರಿಸುವುದು ಅಗತ್ಯವಾಗಿದೆ.

ವಸತಿ ಯೋಜನೆಗೆ ಗುರುತಿಸಿದ ಜಾಗ ಅಭಿವೃದ್ಧಿ ಪಡಿಸದೆ ಜನರ ದಿಕ್ಕು ತಪ್ಪಿಸಲು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ನಿವೇಶನ ಗುರುತಿಸದ ಪರಿಸ್ಥಿತಿಯಲ್ಲಿ ಜಾಗೆ ತಗ್ಗು-ದಿನ್ನಿಗಳು ಗುಡ್ಡ ಹಾಗೆ ಇದೆ. ಮನೆ ಕಟ್ಟಲು ರಸ್ತೆ ನಿರ್ಮಿಸಲು ಸರಿಯಾದ ವ್ಯವಸ್ಥೆ ಇಲ್ಲ. ತರಾತುರಿಯಲ್ಲಿ ಹಕ್ಕು ಪತ್ರ ವಿತರಣೆಯಾಗಿದೆ. ಅದರಿಂದ ಪ್ರಯೋಜನ ಇಲ್ಲ.  -ದೊಡ್ಡನಗೌಡ ಪಾಟೀಲ, ಶಾಸಕರು

ರಾಜೀವಗಾಂಧಿ ವಸತಿ ಯೋಜನೆಯಡಿ ಹುನಗುಂದ ಪುರಸಭೆ ಮೂಲಕ 881 ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರುತ್ತೇನೆ.  -ಅಶೋಕ ಪಾಟೀಲ, ಪುರಸಭೆ ಮುಖ್ಯಾಧಿಕಾರಿ

-ಸುರೇಶ ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next