Advertisement

ರಾಜ್ಯದ 103 ತಾ|ನೆರೆ ಸಂತ್ರಸ್ತರಿಗೆ ಬಸವ, ಆಶ್ರಯ!

01:09 AM Aug 29, 2019 | Sriram |

ಕುಂದಾಪುರ: ರಾಜ್ಯದ 103 ತಾಲೂಕುಗಳಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ಗೃಹನಿರ್ಮಾಣಕ್ಕೆ 5 ಲಕ್ಷ ರೂ. ನೀಡುವುದಾಗಿ ಹೇಳಿದ ಸರಕಾರ ಆ ಮನೆಗಳನ್ನು ರಾಜೀವ್‌ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಬರುವ ಬಸವ, ಆಶ್ರಯದಂತಹ ಯೋಜನೆಗಳ ವ್ಯಾಪ್ತಿಗೆ ಸೇರಿಸಲು ಸೂಚಿಸಿದೆ. ಫ‌ಲಾನುಭವಿಗೆ ಮನೆ ಕಟ್ಟಿಕೊಳ್ಳಲು ಅಸಾಧ್ಯವಾದರೆ ಕಂದಾಯ ಇಲಾಖೆಯ ಅನುಷ್ಠಾನ ಸಂಸ್ಥೆಗಳ ಮೂಲಕ ನಿರ್ಮಿಸಿಕೊಡಲು ನಿರ್ದೇಶಿಸಲಾಗಿದೆ.

Advertisement

50 ಸಾವಿರ ರೂ. ಬಾಡಿಗೆ
ಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ., 10 ತಿಂಗಳ ಅವಧಿಗೆ ಸೀಮಿತವಾಗಿ ಒಟ್ಟು 50 ಸಾವಿರ ರೂ. ತಾತ್ಕಾಲಿಕ ವಸತಿಗಾಗಿ ಮನೆ ಬಾಡಿಗೆ ನೀಡಲಾಗುತ್ತದೆ. 10 ತಿಂಗಳ ಮೊದಲೇ ಮನೆ ರಚನೆಯಾದರೂ ಬಾಡಿಗೆ ಮೊತ್ತ ಏಕಗಂಟಿನಲ್ಲಿ ದೊರೆಯಲಿದೆ.

ತಗಡಿನ ಶೆಡ್‌ ಹಾಕಿ ತಾತ್ಕಾಲಿಕ ವಸತಿ ಮಾಡಿಕೊಂಡರೂ 50 ಸಾವಿರ ರೂ. ದೊರೆಯಲಿದೆ. ಮನೆಯ ಪಂಚಾಂಗವಷ್ಟೇ ಗಟ್ಟಿಯಿದ್ದು, ಇತರ ಮೂಲರಚನೆಗೆ ಧಕ್ಕೆಯಾಗಿ ಶೇ. 75ರಷ್ಟು ಹಾನಿಯಾದರೆ 1 ಲಕ್ಷ ರೂ., ಶೇ. 25ಕ್ಕಿಂತ ಕಡಿಮೆ ಹಾನಿಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ರಾಜೀವ್‌ ಗಾಂಧಿ ನಿಗಮ ನಿಯಮದಂತೆ ಕಾಮಗಾರಿ ಭಾಗಶಃ ಆದ ಬಳಿಕ ಅನುದಾನ ನೀಡಲಾಗುತ್ತದೆ. ಆದರೆ ನೆರೆ ಸಂತ್ರಸ್ತರಿಗೆ ಮಾತ್ರ ಪರಿಹಾರದ ಮೊದಲ ಕಂತನ್ನು ಮುಂಗಡವಾಗಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.

ಸಾಫ್ಟ್ವೇರ್‌ ರಚನೆ
ನೆರೆ ಸಂತ್ರಸ್ತರಿಗೆ ತುರ್ತಾಗಿ ವಸತಿ ಮಂಜೂರುಗೊಳಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದ್ದು, ಈ ಸಾಫ್ಟ್ವೇರ್‌ನಲ್ಲಿ ಜಿಲ್ಲಾಧಿಕಾರಿಗಳು ಗುರುತಿಸಿದ ನಿರ್ವಸಿತರ ಪಟ್ಟಿಯನ್ನು ನಮೂದಿಸಬೇಕಿದೆ.

ಸವಾಲಿನ ಕೆಲಸ
ಮನೆ ಪೂರ್ಣ ಪ್ರಮಾಣದಲ್ಲಿ ನಾಶವಾಗಿದ್ದರೆ ಯೋಜನೆಯಡಿ ನಿರ್ಮಿಸಿಕೊಳ್ಳಲು ಅಂತಹ ಮನೆಗಳ ಸದಸ್ಯರ ಆಧಾರ್‌, ಪಡಿತರ ಚೀಟಿ, ಬ್ಯಾಂಕ್‌ ಖಾತೆ ಮಾಹಿತಿ ಇತ್ಯಾದಿ ಒದಗಿಸಬೇಕಾಗುತ್ತದೆ. ಕೆಲವೆಡೆ ನೆರೆಹಾನಿ ತೆರವು ಕಾರ್ಯಾಚರಣೆಯೇ ಪೂರ್ಣಗೊಂಡಿಲ್ಲ. ಹೀಗಿರುವಾಗ ನಾಶವಾದ ಫ‌ಲಾನುಭವಿಗಳ ದಾಖಲೆಗಳಿಗೆ ಏನು ಪರ್ಯಾಯ ಎನ್ನುವ ಕುರಿತು ಜಿಲ್ಲಾಡಳಿತ ಗಮನ ಕೊಡಬೇಕಿದೆ.

Advertisement

ಜಾಗ ಬದಲಿಸುವಂತಿಲ್ಲ
ಹಾನಿಗೊಳಗಾದ ಜಾಗದಲ್ಲಿಯೇ ಮನೆ ನಿರ್ಮಿಸಲು ಅಭ್ಯಂತರವಿಲ್ಲವೆಂದು ಜಿಲ್ಲಾಧಿಕಾರಿ ದೃಢೀಕರಣ ನೀಡಬೇಕು. ಹೊಸ ಜಾಗದಲ್ಲಿ ಮನೆ ನಿರ್ಮಾಣ ಮಾಡಬೇಕಾದರೆ ಕಂದಾಯ ಇಲಾಖೆ ಸ್ಥಳಾಂತರಿಸಬೇಕಾದ ಹಳ್ಳಿಗಳ ಪಟ್ಟಿಯನ್ನು ಅನುಮೋದಿಸಿದ ಅನಂತರವಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆ ಬಳಿಕ ಜಿಲ್ಲಾಧಿಕಾರಿ ಕೂಡ ಪಟ್ಟಿ ಬದಲಾಯಿಸುವಂತಿಲ್ಲ. ಮನೆ ನಿರ್ಮಾಣಕ್ಕೆ ಫ‌ಲಾನುಭವಿಗೇ ಆದ್ಯತೆ ನೀಡಬೇಕು. ಫ‌ಲಾನುಭವಿ ಅಸಾಧ್ಯವೆಂದು ಬರೆದುಕೊಟ್ಟರೆ, ಅದನ್ನು ಜಿಲ್ಲಾಧಿಕಾರಿ ದೃಢೀಕರಿಸಿದ ಬಳಿಕ ಕಂದಾಯ ಇಲಾಖೆಯು ಕಟ್ಟಿಸಿಕೊಡಬಹುದು.

ಬಸವ, ಆಶ್ರಯ, ಪ್ರಧಾನಿ ಆವಾಸ್‌
ಫ‌ಲಾನುಭವಿಗಳ ಪೈಕಿ ಅರ್ಹ ಕುಟುಂಬಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಆದ್ಯತೆ ನೀಡಿ ಸೂಕ್ತ ವಸತಿ ಯೋಜನೆಗಳ ಮಾನದಂಡಗಳಂತೆ ಅರ್ಹತೆಯನ್ನು ಪರಿಶೀಲಿಸಿ ಸಂಯೋಜಿಸಬೇಕು. ವಸತಿ ಯೋಜನೆಗೆ ಮೀಸಲಿಟ್ಟ ಗುರಿಯನ್ನು ಇದರ ಜತೆ ವಿಲೀನ ಮಾಡುವಂತೆ ಸೂಚಿಸಲಾಗಿದೆ. ಪರಿಣಾಮವಾಗಿ ಈ ಬಾರಿ ಬಸವ, ಆಶ್ರಯ, ಪ್ರಧಾನಮಂತ್ರಿ ಆವಾಸ್‌ ಮನೆಗಳು ನೆರೆ ಫ‌ಲಾನುಭವಿಗಳ ಖಾತೆಗೆ ಗರಿಷ್ಠ ಜಮೆಯಾಗಲಿದ್ದು, ಇತರ ಅರ್ಜಿದಾರರಿಗೆ ಕಡಿಮೆ ಸಿಗಲಿವೆ.

ದಾಖಲೆ ನೀಡಲು ಕ್ರಮ
ನೆರೆಹಾನಿಯಲ್ಲಿ ದಾಖಲೆಗಳನ್ನು ಕಳೆದುಕೊಂಡವರಿಗೆ ಕಂದಾಯ ಇಲಾಖೆ ವತಿಯಿಂದ ಮಹಜರು ಮಾಡಿ ದಾಖಲೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಆಧಾರ್‌, ಪಡಿತರ, ಬ್ಯಾಂಕ್‌ ಖಾತೆ ವಿವರ ಸೇರಿದಂತೆ ಎಲ್ಲ ದಾಖಲೆಗಳನ್ನೂ ಮಾಡಿಕೊಡಲಾಗುವುದು. ಯಾವುದೇ ಆತಂಕ ಅನಗತ್ಯ.
– ಶಶಿಕಾಂತ ಸೆಂಥಿಲ್‌
ದ.ಕ. ಜಿಲ್ಲಾಧಿಕಾರಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next