ಹೊಸದಿಲ್ಲಿ: ಕಾಶ್ಮೀರಿ ಪಂಡಿತರ ನೋವಿನ ಕಥೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆಯಾದಾಗಿನಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಆರೋಪಗಳು ಉತ್ತುಂಗಕ್ಕೇರಿದ್ದು, ಕಾಶ್ಮೀರಿ ಪಂಡಿತರ ಹೊರದಬ್ಬುವಿಕೆಯ ವಿರುದ್ಧ ಸಂಸತ್ತಿನಲ್ಲಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದರು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿ ಮತ್ತು ಸಂಘ ಪರಿವಾರ ಕಾಶ್ಮೀರಿ ಪಂಡಿತರ ದುಃಸ್ಥಿತಿಗೆ ಕಾಂಗ್ರೆಸನ್ನು ಗುರಿಯಾಗಿಸುವುದನ್ನು ಮುಂದುವರೆಸಿದ್ದು, ‘ವೈಫಲ್ಯವನ್ನು ಚಲನಚಿತ್ರದ ಹೊದಿಕೆಯ ಅಡಿಯಲ್ಲಿ ಮರೆಮಾಡಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಈಗ ಪ್ರತಿವಾದ ಮಾಡುತ್ತಿದೆ.
”ಪಂಡಿತರ ವಲಸೆ ನಡೆಯುತ್ತಿರುವಾಗ ಸಂಸತ್ತನ್ನು ಘೇರಾವ್ ಮಾಡಿದ ರಾಜೀವ್ ಗಾಂಧಿ ಅವರು ಸಂತ್ರಸ್ತರಿಗೆ ಸಹಾಯ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು, ಆದರೆ ಯಾರೂ ಕೇಳಲಿಲ್ಲ. ಕಾಶ್ಮೀರದಲ್ಲಿ ಕುಟುಂಬದ ಬೇರುಗಳಿರುವುದರಿಂದ ಅವರು ನೋವು ತೋಡಿಕೊಂಡಿದ್ದರು. ಆಗ ಬಿಜೆಪಿ ಬೆಂಬಲದೊಂದಿಗೆ ವಿಪಿ ಸಿಂಗ್ ನೇತೃತ್ವದ ಸರ್ಕಾರವನ್ನು ಯಾರು ನಡೆಸುತ್ತಿದ್ದರು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
”2004 ರಿಂದ 2014 ರವರೆಗಿನ 10 ವರ್ಷಗಳ ಯುಪಿಎ ಆಡಳಿತದ ಅವಧಿಯಲ್ಲಿ ಸರ್ಕಾರವು 4241 ಭಯೋತ್ಪಾದಕರನ್ನು ಹತ್ಯೆಗೈದಿತ್ತು. ಕಾಶ್ಮೀರಿ ಪಂಡಿತರಿಗೆ 3000 ಉದ್ಯೋಗಗಳನ್ನು ಪ್ರಧಾನಮಂತ್ರಿ ಪ್ಯಾಕೇಜ್‌ನ ಅಡಿಯಲ್ಲಿ ನೀಡಲಾಗಿತ್ತು ಮತ್ತು 5911 ತಾತ್ಕಾಲಿಕ ಮನೆಗಳನ್ನು ನಿರ್ಮಿಸಲಾಗಿತ್ತು. ಬಿಜೆಪಿಯ ಎಂಟು ವರ್ಷಗಳ ಆಡಳಿತದಲ್ಲಿ ಆದರೆ ಕೇವಲ 520 ಮಂದಿಗೆ ಉದ್ಯೋಗಗಳನ್ನು ನೀಡಲಾಗಿದೆ ಮತ್ತು 100 ತಾತ್ಕಾಲಿಕ ಮನೆಗಳನ್ನು ನಿರ್ಮಿಸಲಾಗಿದೆ, ಅವರು ಹಳೆಯ ಗಾಯಗಳನ್ನು ಮತ್ತೆ ಕೊರೆಯುತ್ತಿದ್ದಾರೆ, ಆದರೆ ಏನನ್ನೂ ಮಾಡುತ್ತಿಲ್ಲ” ಎಂದು ಸುರ್ಜೆವಾಲಾ ಹೇಳಿದ್ದಾರೆ.
ಚಿತ್ರವನ್ನು ವೀಕ್ಷಿಸಿದ ಛತ್ತೀಸ್‌ಗಢದ ಪಕ್ಷದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಇದು ಅರ್ಧಸತ್ಯವನ್ನು ಆಧರಿಸಿದೆ ಮತ್ತು ಬಿಜೆಪಿಯು ಅದನ್ನು ಹೊರಹಾಕುತ್ತಿದೆ ಎಂದು ಹೇಳಿದ್ದಾರೆ.